HEALTH TIPS

ಜಾಗತಿಕ ಮುಜುಗರಕ್ಕೆ ವಿರೋಧಿಗಳ ಯತ್ನ: ಯೋಗಿ

ಪ್ರಯಾಗ್‌ರಾಜ್‌: ಮೌನಿ ಅಮಾವಾಸ್ಯೆಯಂದು ನಡೆದ ಕಾಲ್ತುಳಿತದ ದುರಂತದ ವಿಷಯವನ್ನು ಬಳಸಿಕೊಂಡು ಮಹಾಕುಂಭ ಮೇಳದ ವೈಭವಕ್ಕೆ ಧಕ್ಕೆ ತರಲು ರಾಜಕೀಯ ವಿರೋಧಿಗಳು ಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ದೂರಿದರು.

ಕಾಲ್ತುಳಿತ ಸಂಭವಿಸಿದ ನಂತರ ಮೊದಲ ಬಾರಿಗೆ ಮಹಾಕುಂಭಮೇಳ ನಗರಕ್ಕೆ ಭೇಟಿ ನೀಡಿದ ಬಳಿಕ ಸಂತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸನಾತನ ಧರ್ಮದ ವಿರೋಧಿಗಳು ಸಂತರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ.

ಈ ಮೂಲಕ ಕಾಲ್ತುಳಿತದ ಘಟನೆಯು ಜಾಗತಿಕವಾಗಿಯೂ ಮುಜುಗರವಾಗಬೇಕು ಎಂದು ಬಯಸುತ್ತಿದ್ದಾರೆ' ಎಂದು ಕಿಡಿಕಾರಿದರು.

'ಕಾಲ್ತುಳಿತದ ದುರಂತ ಸಂಭವಿಸಿದಾಗ ಸಂತರು ಸಂಯಮದಿಂದ ವರ್ತಿಸಿದರು. ಕಳೆದ 19 ದಿನಗಳಲ್ಲಿ ಸುಮಾರು 32 ಕೋಟಿ ಮಂದಿ ಮಹಾಕುಂಭಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ' ಎಂದು ಹೇಳಿದರು.

ಫೆ. 3ರಂದು ವಸಂತ ಪಂಚಮಿ. ಅಂದು ಸಹ ಅಸಂಖ್ಯಾತ ಭಕ್ತರು ಪವಿತ್ರ ಸ್ನಾನಕ್ಕಾಗಿ ತ್ರಿವೇಣಿ ಸಂಗಮಕ್ಕೆ ಬರಲಿದ್ದು, ಸರ್ಕಾರ ಕೈಗೊಂಡಿರುವ ಸಿದ್ಧತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ವೈಮಾನಿಕ ಸಮೀಕ್ಷೆ ಮೂಲಕ ವೀಕ್ಷಿಸಿದರು.

ಕುಂಭಮೇಳದ ಮೇಲುಸ್ತುವಾರಿ ನಿರ್ವಹಣೆಯಲ್ಲಿ ಯೋಗಿ ಸರ್ಕಾರ ವಿಫಲವಾಗಿದ್ದು, ನಿರ್ವಹಣೆಯ ಜವಾಬ್ದಾರಿಯನ್ನು ಸೇನೆಗೆ ಹಸ್ತಾಂತರಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿರುವುದಕ್ಕೆ ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.

ವಸಂತ ಪಂಚಮಿ ಅಮೃತ ಸ್ನಾನ: ಸಕಲ ಮುನ್ನಚ್ಚರಿಕೆ

ಲಖನೌ: ಮೌನಿ ಅಮವಾಸ್ಯೆಯಂದು 'ಅಮೃತ ಸ್ನಾನ'ದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 30 ಮಂದಿ ಮೃತಪಟ್ಟ ಕಾರಣ ಮುಂದಿನ 'ಅಮೃತ ಸ್ನಾನ'ಗಳಲ್ಲಿ ಇಂಥ ಯಾವುದೇ ಅವಘಡಗಳು ನಡೆಯದಿರಲಿ ಎಂದು ಮೇಳದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಫೆ.3ರ ವಸಂತ ಪಂಚಮಿ ದಿನ ಮೂರನೇ 'ಅಮೃತ ಸ್ನಾನ' ನೆರವೇರಲಿದ್ದು ಸಂಗಮದಲ್ಲಿ ಮಾತ್ರವಲ್ಲದೆ ಇತರೆ ಘಾಟ್‌ಗಳಲ್ಲಿಯೂ ಪುಣ್ಯ ಸ್ನಾನ ಮಾಡುವಂತೆ ಭಕ್ತರನ್ನು ಅಧಿಕಾರಿಗಳು ಪ್ರೋತ್ಸಾಹಿಸುತ್ತಿದ್ದಾರೆ. ವಸಂತ ಪಂಚಮಿ ಅಮೃತ ಸ್ನಾನವು ಭಾನುವಾರ ರಾತ್ರಿಯಿಂದಲೇ ಆರಂಭವಾಗಲಿದ್ದು ಮೂರು ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜನರ ನಿರ್ವಹಣೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹೊಸ ರೀತಿಯ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಎಲ್ಲಾ ವಿವಿಐಪಿ ಪಾಸ್‌ಗಳನ್ನು ರದ್ದು ಮಾಡಲಾಗಿದೆ. ಮೇಳದ ಪ್ರದೇಶವನ್ನು ‌'ವಾಹನರಹಿತ ವಲಯ' ಎಂದು ಘೋಷಿಸಲಾಗಿದೆ. ಸಂಗಮಕ್ಕೆ ತೆರಳಲು ಮತ್ತು ಪುಣ್ಯ ಸ್ನಾನದ ಬಳಿಕ ಹಿಂದಿರುಗಲು ಪ್ರತ್ಯೇಕ ಮಾರ್ಗವನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries