ನ್ಯೂಯಾರ್ಕ್/ ವಾಷಿಂಗ್ಟನ್: ಇಸ್ರೇಲ್‌ನ ಗಾಜಾಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿಯ ಘೋಷಣೆ ಮಾಡಿದ್ದಾರೆ.
ಗಾಜಾಪಟ್ಟಿಯನ್ನು ಆರ್ಥಿಕವಾಗಿ ಅಭಿವೃದ್ಧಿಗೊಳಿಸಿ, ಜನರಿಗೆ ಉದ್ಯೋಗ ಮತ್ತು ವಸತಿಯನ್ನು ಕಲ್ಪಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕಕ್ಕೆ ಭೇಟಿ ನೀಡಿದ್ದು, ಅವರೊಂದಿಗೆ ಶ್ವೇತ ಭವನದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಟ್ರಂಪ್, ಗಾಜಾದಲ್ಲಿ ಭೂಮಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ. ಆದರೆ ಅಲ್ಲಿ ಯಾರು ವಾಸಿಸಬಹುದು ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ.
'ಯುದ್ಧ ಪೀಡಿತ ಗಾಜಾ ಭೂಮಿಯಲ್ಲಿರುವ ಅಪಾಯಕಾರಿ ಸ್ಫೋಟಿಸದ ಬಾಂಬ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿ, ನಾಶವಾದ ಕಟ್ಟಡಗಳನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ಗಾಜಾ ಪಟ್ಟಿ ಆರ್ಥಿಕ ಅಭಿವೃದ್ಧಿಯಾಗುವಂತೆ ಮಾಡುತ್ತೇವೆ' ಎಂದು ಭರವಸೆ ನೀಡಿದ್ದಾರೆ.
'ಪ್ಯಾಲಿಸ್ಟೀನ್ ಜನರು ಗಾಜಾಕ್ಕೆ ಹಿಂತಿರುಗಲೇಬೇಕು, ಏಕೆಂದರೆ ಅವರಿಗೆ ಪರ್ಯಾಯ ಜಾಗವಿಲ್ಲ. ಆದರೆ ಅಲ್ಲಿಯ ಕಟ್ಟಡಗಳು ಸಂಪೂರ್ಣ ನೆಲಸಮಗೊಂಡಿವೆ. ಅಲ್ಲಿರುವವರು ಕುಸಿದ ಕಟ್ಟಡಗಳ ಅಡಿಯಲ್ಲಿ ವಾಸಿಸುತ್ತಿದ್ದಾರೆ. ಅದು ಅಪಾಯಕಾರಿಯಾಗಿದೆ. ನಾವು ಗಾಜಾವನ್ನು ಪಡೆದುಕೊಂಡ ಮೇಲೆ ಜನ ಸುರಕ್ಷಿತವಾಗಿ ಸುಂದರ ಪ್ರದೇಶದಲ್ಲಿ ಬದುಕಬಹುದು. ಊರು ತೊರೆದ ಜನರು ಮತ್ತೆ ಹಿಂತಿರುಗಿ ಶಾಂತಿ ಮತ್ತು ಸಾಮರಸ್ಯದಿಂದ ಜೀವನ ನಡೆಸಬಹುದು' ಎಂದಿದ್ದಾರೆ.
ಗಾಜಾ ಪಟ್ಟಿ 'ಸಾವು ಮತ್ತು ವಿನಾಶದ ಸಂಕೇತ' ಎಂದು ಕರೆದಿರುವ ಟ್ರಂಪ್, ಈಗ ಅದು ನರಕವಾಗಿದೆ ಎಂದಿದ್ದಾರೆ.
'ಗಾಜಾ ಪಟ್ಟಿ ಮಾತ್ರವಲ್ಲದೆ ಸಂಪೂರ್ಣ ಮಧ್ಯಪ್ರಾಚ್ಯಕ್ಕೆ ಉತ್ತಮ ರಕ್ಷಕರಾಗುತ್ತೇವೆ. ಉದ್ಯೋಗವನ್ನು ನಿರ್ದಿಷ್ಟ ಗುಂಪಿಗೆ ಸೀಮಿತವಾಗಿಡದೆ ಎಲ್ಲರಿಗೂ ಸಿಗುವಂತೆ ಮಾಡುತ್ತೇವೆ' ಎಂದು ಹೇಳಿದ್ದಾರೆ.




