ವಿಶ್ವಸಂಸ್ಥೆ: 'ಭಾರತವು ವಿಶ್ವಸಂಸ್ಥೆಯ ಶಾಂತಿಪಾಲನೆಯ ಮೂಲಾಧಾರವಾಗಿದೆ. ಶಾಶ್ವತ ಶಾಂತಿ ಸ್ಥಾಪನೆಯ ಕಾರ್ಯಾಚರಣೆಗಳಲ್ಲಿ ಭಾರತೀಯ ಮಹಿಳಾ ಶಾಂತಿಪಾಲಕರ ಕೊಡುಗೆ ಮಹತ್ವದ್ದಾಗಿದೆ' ಎಂದು ವಿಶ್ವಸಂಸ್ಥೆಯ ಶಾಂತಿಪಾಲನಾ ಮುಖ್ಯಸ್ಥ ಜೀನ್-ಪಿಯರೆ ಲ್ಯಾಕ್ರೊಯಿಕ್ಸ್ ಹೇಳಿದ್ದಾರೆ.
ಇದೇ 24 ಮತ್ತು 25ರಂದು ಭಾರತದಲ್ಲಿ ನಡೆಯಲಿರುವ 'ಶಾಂತಿಪಾಲನೆಯಲ್ಲಿ ಮಹಿಳೆಯರ ಪಾತ್ರ ಹೆಚ್ಚಿಸಲು ಜಾಗತಿಕ ದಕ್ಷಿಣದ ಒಳಗೊಳ್ಳುವಿಕೆ' ಕುರಿತ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಭೇಟಿ ನೀಡುತ್ತಿರುವ ಅವರು ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ವಿಶ್ವದ ಕೆಲವು ಕಠಿಣ ಸವಾಲಿನ ಸಂಘರ್ಷ ವಲಯಗಳಲ್ಲಿ ನಮ್ಮ ಸಮವಸ್ತ್ರಧಾರಿ ಸಿಬ್ಬಂದಿ ಮತ್ತು ಸ್ಥಳೀಯ ಸಮುದಾಯಗಳ ನಡುವೆ ವಿಶ್ವಾಸವನ್ನು ರೂಪಿಸುವಲ್ಲಿ ಭಾರತೀಯ ಮಹಿಳಾ ಶಾಂತಿಪಾಲಕರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ವಿಶ್ವಸಂಸ್ಥೆಯ ಶಾಂತಿಪಾಲನೆ ಕಾರ್ಯಾಚರಣೆಗಳಲ್ಲಿ ಅವರ ಉಪಸ್ಥಿತಿ ಅನಿವಾರ್ಯವೆಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಶಾಂತಿಪಾಲನೆಗೆ ನಿಜವಾದ ವ್ಯಾಖ್ಯಾನವನ್ನು ಇವರು ನೀಡಿದ್ದಾರೆ' ಎಂದು ಬಣ್ಣಿಸಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಸುಮಾರು 50 ದೇಶಗಳ ಮಹಿಳಾ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಶಾಂತಿಪಾಲನೆಯಲ್ಲಿ ಎದುರಾಗುತ್ತಿರುವ ಸವಾಲುಗಳು ಮತ್ತು ಶಾಂತಿ ಹಾಗೂ ಸುರಕ್ಷತೆ ಖಾತ್ರಿಪಡಿಸುವಲ್ಲಿ ಮಹಿಳೆಯರು ವಹಿಸುವ ನಿರ್ಣಾಯಕ ಪಾತ್ರದ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.




