ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತ ಹಸ್ತಾಂತರಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಗುರುವಾರ ಹೇಳಿದೆ.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ಗಲಭೆ ಹಾಗೂ ಅಲ್ಪಸಂಖ್ಯಾತರ ಗುರಿಯಾಗಿಸಿ ನಡೆದ ದಾಳಿಗಳ ಹಿಂದೆ ಶೇಖ್ ಹಸೀನಾ ಅವರ ಪಾತ್ರವಿದೆ ಎಂದು ವಿಶ್ವಸಂಸ್ಥೆಯ ಸತ್ಯಶೋಧನಾ ವರದಿಯಲ್ಲಿ ಹೇಳಿರುವ ಬೆನ್ನಲ್ಲೇ, ಬಿಎನ್‌ಪಿ ಈ ಮಾತು ಹೇಳಿದೆ.
'ವಿಶ್ವಸಂಸ್ಥೆಯ ವರದಿಯಲ್ಲಿ ಶೇಖ್ ಹಸೀನಾ ವಿರುದ್ಧ ಆರೋಪಗಳಿವೆ. ಅಧಿಕಾರದಲ್ಲಿ ಮುಂದುವರಿಸುವ ಉದ್ದೇಶದಿಂದ ಅವರು ದಾಳಿಗಳು ಹಾಗೂ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದವರ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದಾಗಿ ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ, ಇಲ್ಲಿ ವಿಚಾರಣೆ ಎದುರಿಸುವುದಕ್ಕಾಗಿ ಅವರನ್ನು ಹಸ್ತಾಂತರಿಸಬೇಕು' ಎಂದು ಬಿಎನ್‌ಪಿ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಖ್ರುಲ್ ಇಸ್ಲಾಂ ಆಲಂಗೀರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
'ಶೇಖ್ ಹಸೀನಾ ಅವರ ಆದೇಶದಂತೆ ಸಾಮೂಹಿಕ ಹತ್ಯೆಗಳನ್ನು ಮಾಡಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದ್ದು, ಪ್ರಜಾಪ್ರಭುತ್ವದ ಕೊಲೆ ಮಾಡಲಾಗಿದೆ ಎಂಬುದಾಗಿ ವಿಶ್ವಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ' ಎಂದು ಹೇಳಿದರು.
'ಹಸೀನಾ, ಫ್ಯಾಸಿಸ್ಟ್ ಹಾಗೂ ದೇಶದ ಜನರಿಗೆ ಕಿರುಕುಳ, ಚಿತ್ರಹಿಂಸೆ ನೀಡಿ ಅವರನ್ನು ಕೊಂದಿರುವುದು ಸಾಬೀತಾಗಿದೆ' ಎಂದರು.
'ಶೇಖ್ ಹಸೀನಾ ವಿರುದ್ಧ ತನಿಖೆ ನಡೆಸುವುದಕ್ಕಾಗಿ, ಅವರು ಅವರ ಸಹಚರರನ್ನು ಬಾಂಗ್ಲಾದೇಶಕ್ಕೆ ಕೂಡಲೇ ಹಸ್ತಾಂತರಿಸುವಂತೆ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ' ಎಂದು ಮಿರ್ಜಾ ಫಖ್ರುಲ್ ಹೇಳಿದರು.




