ಕಾಸರಗೋಡು: ದೂರುಗಳನ್ನು ವಿವರವಾಗಿ ಪರಿಶೀಲಿಸಿ ಚುನಾವಣಾ ಮಾರ್ಗಸೂಚಿಗಳ ಆಧಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಲಿಮಿಟೇಶನ್ ಆಯೋಗದ ಅಧ್ಯಕ್ಷ ಎ. ಷಹಜಹಾನ್ ಹೇಳಿದ್ದಾರೆ. ಆಯೋಗದ ವಿಚಾರಣೆಯ ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, ಪ್ರಸಕ್ತ 10 ಜಿಲ್ಲೆಗಳಲ್ಲಿ ಸಾಕ್ಷ್ಯ ಸಂಗ್ರಹ ಸಂಪೂರ್ಣಗೊಂಡಿದೆ. ಕಾಸರಗೋಡು ಜಿಲ್ಲೆಯಲ್ಲಿ 854 ದೂರುಗಳನ್ನು ಪರಿಗಣಿಸಲಾಗಿದೆ. ಆಯೋಗದ ಮುಂದೆ ಬಂದ ಎಲ್ಲಾ ದೂರುಗಳನ್ನು ಖುದ್ದಾಗಿ ಪರಿಶೀಲಿಸಿ , ಜಿಲ್ಲಾ ಮಟ್ಟದಲ್ಲಿರುವ ಸಾಕ್ಷ್ಯ ಸಂಗ್ರಹ ಪೂರ್ಣಗೊಂಡ ನಂತರ ದೂರುಗಳನ್ನು ಮರುಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಶಯಗಳು ಕಂಡುಬಂದಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಅಧಿಕಾರಿಗಳಿಂದ ವಿವರಗಳನ್ನು ಸಂಗ್ರಹಿಸಲಾಗುವುದು. ವಾರ್ಡ್‍ಗಳ ಹೆಸರು ಬದಲಾವಣೆ, ಗಡಿ ನಿರ್ಣಯ ದೋಷಗಳು, ಮನೆ ಸಂಖ್ಯೆಗಳನ್ನು ಕೈಬಿಡುವುದು, ನಕಲು ಮಾಡುವುದು, ಆಯೋಗ ಪ್ರಕಟಿಸಿದ ನಕ್ಷೆ ಮತ್ತು ಗಡಿಗಳ ನಡುವೆ ಇರುವ ವ್ಯತ್ಯಾಸ ಮೊದಲಾದ ದೂರುಗಳು ಆಯೋಗದ ಮುಂದೆ ಬಂದಿತ್ತು. ಕಾಸರಗೋಡು ನಗರಸಭಾ ಸಮ್ಮೇಳ ಸಭಾಂಗಣದಲ್ಲಿ ನಡೆದ ಸಾಕ್ಷ್ಯ ಸಂಗ್ರಹದಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಪಿ. ಅಖಿಲ್, ಡಿಲಿಮಿಟೇಶನ್ ಆಯೋಗದ ಉಪ ನಿರ್ದೇಶಕ ಕೆ. ಪ್ರಶಾಂತ್ ಕುಮಾರ್, ಆಯೋಗದ ಕಚೇರಿ ನೌಕರರು ಉಪಸ್ಥಿತರಿದ್ದರು.



