ನವದೆಹಲಿ: ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಎಫ್‌ಐಆರ್ ದಾಖಲಿಸಲು ಅವಕಾಶ ಇದೆ; ಎರಡೂ ಎಫ್‌ಐಆರ್‌ಗಳ ವ್ಯಾಪ್ತಿ ಭಿನ್ನವಾಗಿದ್ದರೆ ಆ ರೀತಿ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಎಫ್‌ಐಆರ್ ಒಂದನ್ನು ರದ್ದುಪಡಿಸಿ ರಾಜಸ್ಥಾನ ಹೈಕೋರ್ಟ್ 2022ರ ಸೆಪ್ಟೆಂಬರ್ 9ರಂದು ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪಿ.ಕೆ. ಮಿಶ್ರಾ ಅವರು ಇರುವ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಅಸಿಂಧುಗೊಳಿಸಿದೆ.
ಜೈವಿಕ ಡೀಸೆಲ್ ಮಾರಾಟಕ್ಕೆ ಪ್ರತಿ ಲೀಟರ್‌ಗೆ ₹2ರಂತೆ ಲಂಚ ಕೇಳಿದ್ದ ಆರೋಪದ ಅಡಿಯಲ್ಲಿ ಮೊದಲನೆಯ ಎಫ್‌ಐಆರ್‌ಅನ್ನು 2022ರ ಏಪ್ರಿಲ್ 4ರಂದು ದಾಖಲಿಸಲಾಗಿತ್ತು. ಜೈವಿಕ ಡೀಸೆಲ್ ಪಂಪ್‌ಗಳನ್ನು ನಡೆಸಲು ಬೇಕಿರುವ ಪರವಾನಗಿ ನೀಡಲು ಲಂಚ ಪಡೆಯುತ್ತಿದ್ದ ಆರೋಪದ ಅಡಿಯಲ್ಲಿ ಏಪ್ರಿಲ್ 24ರಂದು ಎರಡನೆಯ ಎಫ್‌ಐಆರ್ ದಾಖಲಿಸಲಾಗಿತ್ತು.
ಎರಡನೆಯ ಎಫ್‌ಐಆರ್ ದಾಖಲಿಸಿರುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆ ಎಂದು ಹೈಕೋರ್ಟ್ ಹೇಳಿತ್ತು.
ಆದರೆ, ಎರಡೂ ಎಫ್‌ಐಆರ್‌ಗಳ ವ್ಯಾಪ್ತಿ ಭಿನ್ನವಾಗಿದೆ ಎಂಬುದು ವಾಸ್ತವಾಂಶಗಳನ್ನು ಪರಿಗಣಿಸಿದಾಗ ಗೊತ್ತಾಗುತ್ತದೆ ಎಂದು ಪೀಠವು ಹೇಳಿದೆ. ಎರಡನೆಯ ಎಫ್‌ಐಆರ್‌ನ ವ್ಯಾಪ್ತಿಯು ಹಿರಿದಾಗಿದೆ ಎಂದು ಅದು ಹೇಳಿದೆ.




.jpg)

