ನವದೆಹಲಿ: ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕದ ಏಜೆನ್ಸಿಯು (ಯುಎಸ್‌ಎಐಡಿ) ಭಾರತಕ್ಕೆ ನೀಡಿರುವ ನೆರವಿನ ವಿಚಾರವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟಂಪ್ ಆಡಿರುವ ಮಾತುಗಳು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಗುರುವಾರ ವಾಕ್ಸಮರಕ್ಕೆ ಕಾರಣವಾಗಿದೆ. ಟ್ರಂಪ್ ಹೇಳಿಕೆಯನ್ನು ಕಾಂಗ್ರೆಸ್, 'ಅಸಂಬದ್ಧ' ಎಂದು ಟೀಕಿಸಿದೆ.
'ರಾಹುಲ್ ಗಾಂಧಿ ಅವರು ವಿದೇಶಿ ಶಕ್ತಿಗಳಿಗೆ ನೆರವಾಗುತ್ತಿದ್ದಾರೆ ಎಂಬುದನ್ನು ಟ್ರಂಪ್ ಹೇಳಿಕೆ ದೃಢಪಡಿಸಿದೆ' ಎಂದು ಬಿಜೆಪಿ ದೂರಿದೆ.
'ಜೋ ಬೈಡನ್ (ಅಮೆರಿಕದ ಹಿಂದಿನ ಅಧ್ಯಕ್ಷ) ಆಡಳಿತವು ಭಾರತದಲ್ಲಿ ಬೇರೊಂದು ಸರ್ಕಾರವನ್ನು ಆಯ್ಕೆ ಮಾಡಲು ಬಯಸಿತ್ತು' ಎಂದು ಟ್ರಂಪ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರತಿಕ್ರಿಯೆ ಹೊರಬಿದ್ದಿದೆ.
'1961ರ ನವೆಂಬರ್ 3ರಂದು ಸ್ಥಾಪಿಸಲಾದ ಯುಎಸ್‌ಎಐಡಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದೆ ಮತ್ತು ಅಮೆರಿಕದ ಅಧ್ಯಕ್ಷರು ಆ ಏಜೆನ್ಸಿಗೆ ಸಂಬಂಧಿಸಿದಂತೆ ಅವಿವೇಕದ ಹೇಳಿಕೆ ನೀಡಿದ್ದಾರೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.
'ದೇಶದಲ್ಲಿನ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಹಲವು ದಶಕಗಳಿಂದ ಯುಎಸ್‌ಎಐಡಿ ನೀಡಿರುವ ನೆರವನ್ನು ವಿವರಿಸುವ ಶ್ವೇತಪತ್ರವನ್ನು ಸರ್ಕಾರ ಹೊರಡಿಸಬೇಕು' ಎಂದು ಒತ್ತಾಯಿಸಿದ್ದಾರೆ.
ವಿದೇಶಿ ಶಕ್ತಿಗಳ ಜತೆ ಕೈಜೋಡಿಸಿರುವ ರಾಹುಲ್:
'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರದ ಹಿತಾಸಕ್ತಿಗಳನ್ನು ಹಾಳುಮಾಡಲು ಬಯಸುತ್ತಿರುವ ವಿದೇಶಿ ಶಕ್ತಿಗಳಿಗೆ ನೆರವು ನೀಡುತ್ತಿದ್ದಾರೆ' ಎಂದು ಬಿಜೆಪಿ ಐ.ಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ.
ತಾವು ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ವಿದೇಶಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2024ರ ಲೋಕಸಭಾ ಚುನಾವಣೆ ವೇಳೆ ಪ್ರತಿಪಾದಿಸಿದ್ದರು. ಟ್ರಂಪ್ ಈಗ ನೀಡಿರುವ ಹೇಳಿಕೆ ಪ್ರಧಾನಿ ಅವರ ಮಾತನ್ನು 'ದೃಢೀಕರಿಸಿದೆ' ಎಂದು ಹೇಳಿದ್ದಾರೆ.






