ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಗುರುವಾರ ರಾತ್ರಿ ನಾಪತ್ತೆಯಾಗಿದ್ದ 22 ವರ್ಷದ ದಲಿತ ಮಹಿಳೆಯೊಬ್ಬರು ಗ್ರಾಮ ಸಮೀಪವೇ ನಾಲೆಯೊಂದರಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ.
ಈ ಘಟನೆ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು.
ಈ ಪ್ರಕರಣದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳದಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳೆ ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ಗ್ರಾಮದಿಂದ 500 ಮೀಟರ್ ದೂರದಲ್ಲಿರುವ ಸಣ್ಣ ಕಾಲುವೆಯಲ್ಲಿ ಆಕೆಯ ಶವ ಶನಿವಾರ ಬೆಳಿಗ್ಗೆ ಪತ್ತೆಯಾಯಿತು. ಶವದ ಮೈಮೇಲೆ ಬಟ್ಟೆ ಇರಲಿಲ್ಲ. ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಲಾಗಿತ್ತು. ಕಣ್ಣುಗಳು ಇರಲಿಲ್ಲ. ದೇಹದ ಮೇಲೆ ಆಳ ಗಾಯಗಳಾಗಿವೆ. ಮೂಳೆ ಮುರಿದಿವೆ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ನಾಪತ್ತೆ ಬಗ್ಗೆ ಶುಕ್ರವಾರವೇ ದೂರು ನೀಡಿದರೂ ಪೊಲೀಸರು ಕ್ರಮ ತೆಗೆದುಕೊಳ್ಳಲಿಲ್ಲ. ಪೊಲೀಸ್ ಅಧಿಕಾರಿಗಳು ನಿಷ್ಕ್ರಿಯತೆ ತೋರಿಸಿದರು ಎಂದು ಕುಟುಂಬ ಆರೋಪಿಸಿದೆ.
'ಅಯೋಧ್ಯೆಯಲ್ಲಿ ದಲಿತ ಮಹಿಳೆಯನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಇದು ಹೃದಯ ವಿದ್ರಾವಕ ಘಟನೆ. ಎಷ್ಟು ದಿನ ಮತ್ತು ಎಷ್ಟು ಕುಟುಂಬಗಳು ಹೀಗೆ ನರಳಬೇಕು? ಬಹುಜನ ವಿರೋಧಿ ಬಿಜೆಪಿ ಆಡಳಿತದಲ್ಲಿ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ, ಘೋರ ದೌರ್ಜನ್ಯಗಳು, ಅನ್ಯಾಯಗಳು ಮತ್ತು ದಲಿತರ ಹತ್ಯೆಗಳು ಹೆಚ್ಚುತ್ತಿವೆ' ಎಂದು ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಅಯೋಧ್ಯೆಯಲ್ಲಿ ಭಗವತ ಕಥಾ ಕೇಳಲು ಹೋದ ದಲಿತ ಹೆಣ್ಣುಮಗಳ ಮೇಲೆ ಎಸಗಿದ ಅನಾಗರಿಕ ಕೃತ್ಯ, ಕ್ರೌರ್ಯ ಮಾನವೀಯತೆಗೆ ನಾಚಿಕೆ ಹುಟ್ಟಿಸುತ್ತದೆ. ಬಿಜೆಪಿಯ ಜಂಗಲ್ ರಾಜ್‌ನಲ್ಲಿ ದಲಿತರು, ಆದಿವಾಸಿಗಳು, ಹಿಂದುಳಿದವರು ಮತ್ತು ಬಡವರ ಗೋಳು ಕೇಳಲು ಯಾರೂ ಇಲ್ಲ. ಉತ್ತರ ಪ್ರದೇಶ ಸರ್ಕಾರವೆಂದರೆ, ದಲಿತರ ಮೇಲಿನ ದೌರ್ಜನ್ಯಕ್ಕೆ ಅನ್ವರ್ಥಕವಾಗಿದೆ' ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಪೊಲೀಸರು ದೂರು ಸ್ವೀಕರಿಸಿದ ನಂತರ ನಾಪತ್ತೆ ವರದಿ ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಅಶುತೋಷ್ ತಿವಾರಿ ತಿಳಿಸಿದ್ದಾರೆ.

