ತಿರುವನಂತಪುರಂ: ಪಿಯಾನೋ ಕಲಿಯಲು ಬಂದಿದ್ದ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪ್ರಮುಖ ಸಂಗೀತ ಕಲಿಕಾ ಕೇಂದ್ರವೊಂದರ ನಿರ್ದೇಶಕರನ್ನು ಬಂಧಿಸಲಾಗಿದೆ.
ತಿರುವನಂತಪುರದ ಚರಾಚಿರಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಡಿಎಂಎಸ್ ಎಂಬ ಕಲಿಕಾ ಸಂಸ್ಥೆಯ ಮಾಲೀಕರು ಮತ್ತು ನಿರ್ದೇಶಕ ಥಾಮಸ್ ವರ್ಗೀಸ್ ಅವರನ್ನು ಬಂಧಿಸಲಾಗಿದೆ. ಸಹೋದರಿಯರಾದ ಹುಡುಗಿಯರು ನೀಡಿದ ದೂರಿನ ಆಧಾರದ ಮೇಲೆ ಮ್ಯೂಸಿಯಂ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ.
ಈ ಘಟನೆ 2011-13ರ ನಡುವೆ ನಡೆದಿತ್ತು. ಸಿಡಿಎಂಎಸ್‍ನಲ್ಲಿ ಓದುತ್ತಿರುವ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೋಕ್ಸೋ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರ ಸಹೋದರಿಯ ಮೇಲೂ ಅವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಹುಡುಗಿಯರು ತಮಗಾದ ಸಂಕಷ್ಟದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು. ಇದಾದ ನಂತರ ಪೋಲೀಸರಿಗೆ ದೂರು ನೀಡಲಾಗಿದೆ. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲು ಪೋಲೀಸರು ನಿರ್ಧರಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಮಾಡಲಾಗಿದೆ.





