ಕೊಚ್ಚಿ: ಕಾನೂನುಬದ್ಧ ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಬದಿಗಳು ಸೇರಿದಂತೆ ಹೊರಾಂಗಣ ಕಟ್ಟಡಗಳಲ್ಲಿ ಶಾಶ್ವತ ಅಥವಾ ತಾತ್ಕಾಲಿಕ ಧ್ವಜಸ್ತಂಭಗಳನ್ನು ನಿರ್ಮಿಸುವುದನ್ನು ನಿಷೇಧಿಸಿ ಹೈಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು, ಪ್ರಸ್ತುತ ಅನುಮತಿಯಿಲ್ಲದೆ ನಿರ್ಮಿಸಲಾಗಿರುವ ಎಲ್ಲಾ ಧ್ವಜಸ್ತಂಭಗಳನ್ನು ತೆಗೆದುಹಾಕಲು 6 ತಿಂಗಳೊಳಗೆ ಸರ್ಕಾರಿ ನೀತಿಯನ್ನು ರೂಪಿಸಬೇಕೆಂದು ಆದೇಶಿಸಿದರು. ಸ್ಥಳೀಯಾಡಳಿತ ಕಾರ್ಯದರ್ಶಿಗಳು ಎರಡು ವಾರಗಳಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸುತ್ತೋಲೆಯನ್ನು ಹೊರಡಿಸಬೇಕು, ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಬೇಕು. ತೆಗೆದುಕೊಂಡ ಕ್ರಮಗಳ ಪ್ರಗತಿಯ ಕುರಿತು ಒಂದು ತಿಂಗಳೊಳಗೆ ಹೈಕೋರ್ಟ್‍ಗೆ ವರದಿ ಸಲ್ಲಿಸುವಂತೆಯೂ ನಿರ್ದೇಶಿಸಲಾಗಿದೆ.
ರಾಜ್ಯದಲ್ಲಿ ಅಕ್ರಮ ಧ್ವಜಸ್ತಂಭಗಳು ವ್ಯಾಪಕವಾಗಿವೆ ಎಂದು ಹೈಕೋರ್ಟ್ ಗಮನಸೆಳೆದಿದೆ. ನ್ಯಾಯಾಲಯದಿಂದ ಪದೇ ಪದೇ ಸೂಚನೆಗಳಿದ್ದರೂ, ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರವು ವರ್ಷಗಳಿಂದ ಹಲವು ಕಾರಣಗಳನ್ನು ನೀಡುತ್ತಾ ಬಂದಿದೆ. ನ್ಯಾಯಾಲಯವು ಅವುಗಳನ್ನು ದಾಖಲಿಸಿಕೊಂಡಿತು. ಆದರೆ ಅದು ಗುರಿ ತಲುಪಲಿಲ್ಲ ಎಂದು ಟೀಕಿಸಲಾಯಿತು.
ಪಂದಳಂನ ಮನ್ನಂ ಸಕ್ಕರೆ ಕಾರ್ಖಾನೆಯ ಮುಂದೆ ಸಿಪಿಎಂ, ಬಿಜೆಪಿ, ಡಿವೈಎಫ್‍ಐ ಇತ್ಯಾದಿಗಳು ಅಕ್ರಮವಾಗಿ ನಿರ್ಮಿಸಿರುವ ಧ್ವಜಸ್ತಂಭಗಳನ್ನು ತೆಗೆದುಹಾಕುವ ಕುರಿತ ಅರ್ಜಿಯನ್ನು ಇತ್ಯರ್ಥಪಡಿಸುವಾಗ ಹೈಕೋರ್ಟ್‍ನ ಆದೇಶ ಬಂದಿದೆ. ಈ ಧ್ವಜಸ್ತಂಭಗಳು ದಾರಿಹೋಕರಿಗೆ ಅನಾನುಕೂಲವನ್ನುಂಟು ಮಾಡುವುದರ ಜೊತೆಗೆ, ಅಪಘಾತಗಳಿಗೂ ಕಾರಣವಾಗುತ್ತವೆ. ಈಗ ಇದಕ್ಕೆ ಕಡಿವಾಣ ಹಾಕಲು ಹೈಕೋರ್ಟ್ ನಿರ್ಧರಿಸಿದೆ.






