ವಾಷಿಂಗ್ಟನ್: ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕ ಏಜೆನ್ಸಿಯನ್ನು (ಯುಎಸ್‌ಎಐಡಿ) ಮುಚ್ಚುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಜೊತೆಗಾರ ಎಲಾನ್ ಮಸ್ಕ್ ಅವರ ನಡೆಗೆ ನ್ಯಾಯಾಲಯದಿಂದ ತಡೆ ಬಂದಿದೆ.
ಏಜೆನ್ಸಿಯ ನೌಕರರನ್ನು ಕೆಲಸದಿಂದ ತೆಗೆಯುವ ಆಲೋಚನೆಗೆ ಜಿಲ್ಲಾ ನ್ಯಾಯಾಧೀಶ ಕಾರ್ಲ್ ನಿಕೊಲ್ಸ್ ಅವರು ಶುಕ್ರವಾರ ತಡೆ ನೀಡಿದ್ದಾರೆ.
ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಏಜೆನ್ಸಿಯ ಸಹಸ್ರಾರು ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ವೆಚ್ಚದಲ್ಲಿ ವಾಪಸ್ ಬರುವುದಕ್ಕೆ ಮೂವತ್ತು ದಿನ ಮಾತ್ರ ಅವಕಾಶ ಇರುತ್ತದೆ ಎಂದು ಹೇಳುವ ಆದೇಶಕ್ಕೆ ಕೂಡ ನ್ಯಾಯಾಧೀಶರು ತಡೆ ನೀಡಿದ್ದಾರೆ.
ಸರ್ಕಾರದ ಈ ಎರಡೂ ಕ್ರಮಗಳು ಅಮೆರಿಕದ ನೌಕರರನ್ನು ಹಾಗೂ ಅವರ ಕುಟುಂಬದ ಸದಸ್ಯರನ್ನು ಅನಗತ್ಯವಾದ ಅಪಾಯಗಳಿಗೆ ಈಡುಮಾಡುವಂತಿದ್ದವು ಎಂದು ನ್ಯಾಯಾಧೀಶರು ಹೇಳಿದ್ದಾರೆ.




