HEALTH TIPS

ವಿಶ್ವದಲ್ಲೇ ಅತಿ ಉದ್ದದ ಮತ್ತು ಶಕ್ತಿಶಾಲಿಯಾದ ಹೈಡ್ರೋಜನ್ ಟ್ರೈನು ಭಾರತದಲ್ಲಿ ಸಿದ್ಧ: ಸಚಿವ ಡಾ. ಅಶ್ವಿನಿ ವೈಷ್ಣವ್

ನವದೆಹಲಿ: ಭಾರತದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ದೇಶದ ಹಲವೆಡೆ ತನ್ನ ವೇಗದಿಂದ ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ತ್ವರಿತವಾಗಿ ತಲುಪಿಸುವ ಪ್ರಯತ್ನದಲ್ಲಿದ್ದರೆ ಇತ್ತ ಹೈಡ್ರೋಜನ್‌ ರೈಲುಗಳು ಕೂಡ ಭಾರತದ ರೈಲ್ವೆ ಹಳಿಗಳಲ್ಲಿ ಓಡಾಡಲು ಸಜ್ಜಾಗಿದೆ. ಹೌದು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳನ್ನು ನಿರ್ಮಿಸಲಾಗುತ್ತಿದ್ದು ಸದ್ಯದಲ್ಲೇ ಪ್ರಾಯೋಗಿಕವಾಗಿ ಇದರ ಸಂಚಾರ ನಡೆಯಲಿದೆ.

ಕೇಂದ್ರ ರೈಲ್ವೆ ಸಚಿವ ಡಾ. ಅಶ್ವಿನಿ ವೈಷ್ಣವ್ ಈ ಬಗ್ಗೆ ವಾರಾಂತ್ಯದಲ್ಲಿ ರಾಜ್ಯಸಭೆಗೆ ಲಿಖಿತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಹೈಡ್ರೋಜನ್ ರೈಲು ಸಂಪೂರ್ಣ ಮಾಲಿನ್ಯರಹಿತ ಸಂಚಾರ ವಾಹನವಾಗಿದೆ. ಭಾರತೀಯ ರೈಲ್ವೆ ಸಂಸ್ಥೆಯ ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್ (ಆರ್​ಡಿಎಸ್​ಒ) ಈ ರೈಲಿನ ಎಂಜಿನ್ ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಿದೆ. ಜಿಂದ್ ಮತ್ತು ಸೋನೆಪತ್ ಸೆಕ್ಷನ್​ನ 89 ಕಿಮೀ ಉದ್ದದ ಮಾರ್ಗದಲ್ಲಿ ಭಾರತದ ಮೊದಲ ಹೈಡ್ರೋಜನ್ ರೈಲು ಪ್ರಾಯೋಗಿಕವಾಗಿ ಸಂಚರಿಸಲಿದೆ.

ಜರ್ಮನಿ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ಬಳಿಕ ಭಾರತವೇ ಹೈಡ್ರೋಜನ್ ಟ್ರೈನ್ ಅನ್ನು ಅಭಿವೃದ್ಧಿಪಡಿಸಿರುವುದು. ಆದರೆ, ಈ ಮೇಲಿನ ದೇಶಗಳಲ್ಲಿರುವ ಹೈಡ್ರೋಜನ್ ರೈಲುಗಳ ಸಾಮರ್ಥ್ಯ 500ರಿಂದ 600 ಹಾರ್ಸ್​ಪವರ್ (ಎಚ್​ಪಿ) ಮಾತ್ರವೇ ಇರುವುದು. ಭಾರತದ ಹೈಡ್ರೋಜನ್ ರೈಲಿನ ಕೆಪಾಸಿಟಿ 1,200 ಎಚ್​ಪಿಯಷ್ಟಿದೆ. ಇದು ವಿಶ್ವದ ಅತಿ ಉದ್ದದ ಹೈಡ್ರೋಜನ್ ರೈಲೂ ಎನ್ನಲಾಗಿದೆ.

ಹೈಡ್ರೋಜನ್ ರೈಲುಗಳು ಹೇಗೆ ಕೆಲಸ ಮಾಡುತ್ತವೆ?

ಹೈಡ್ರೋಜನ್ ರೈಲುಗಳಲ್ಲಿ ಫುಯಲ್ ಸೆಲ್​ಗಳನ್ನು ಇರಿಸಲಾಗುತ್ತದೆ. ಇಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ ಎರಡೂ ಸಂಯೋಜನೆಗೊಂಡಾಗ ವಿದ್ಯುತ್ ಉತ್ಪಾದನೆ ಆಗುತ್ತದೆ. ಈ ವಿದ್ಯುತ್​ನಿಂದ ಮೋಟಾರು ಶಕ್ತಿ ಪಡೆದು ರೈಲನ್ನು ಚಲಿಸುವಂತೆ ಮಾಡುತ್ತದೆ.

ಈ ಪ್ರಕ್ರಿಯೆಯಲ್ಲಿ ಮಾಲಿನ್ಯ ಹೊರಬರುವುದಿಲ್ಲ. ನೀರು ಬೈಪ್ರಾಡಕ್ಟ್ ಆಗಿರುತ್ತದೆ. ಡೀಸಲ್ ಚಾಲಿತ ರೈಲಿಗೆ ಹೋಲಿಸಿದರೆ ಇದರ ಶಬ್ದ ಮಾಲಿನ್ಯವೂ ಕಡಿಮೆಯೇ. ಹೀಗಾಗಿ, ಹೈಡ್ರೋಜನ್ ರೈಲು ಗಮನ ಸೆಳೆಯುತ್ತದೆ. ಇದಕ್ಕೆ ರೀಫುಯಲಿಂಗ್ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. 20 ನಿಮಿಷದಲ್ಲಿ ರೀಫುಯೆಲಿಂಗ್ ಮಾಡಿದರೆ 18 ಗಂಟೆ ಕಾಲ ಇದು ಸಂಚರಿಸಬಲ್ಲುದು ಎನ್ನುತ್ತಾರೆ ತಜ್ಞರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries