ತ್ರಿಶೂರ್: ಪೋಟಾ ಫೆಡರಲ್ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಪೋಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು 36 ಗಂಟೆಗಳ ನಂತರ ತ್ರಿಶೂರ್ ಜಿಲ್ಲೆಯಿಂದ ಬಂಧಿಸಲಾಯಿತು.
ಪೋಲೀಸರಿಂದ ಬಂದ ಮಾಹಿತಿಯ ಪ್ರಕಾರ, ಬಂಧಿತ ವ್ಯಕ್ತಿ ಚಾಲಕುಡಿಯ ಆಶಾರಿಪಾರ ಮೂಲದ ರಿಜೊ ಆಂಟನಿ. ಆತ ವಿಶೇಷ ತನಿಖಾ ತಂಡದ ವಶದಲ್ಲಿದ್ದಾನೆ ಎಂದು ವರದಿಯಾಗಿದೆ. ನಿನ್ನೆ ಪೆರಂಬ್ರದ ಚೆರುಕುನ್ನು ಪ್ರದೇಶದಲ್ಲಿ ಪೋಲೀಸರು ವ್ಯಾಪಕ ಶೋಧ ನಡೆಸಿದ್ದರು.
ಆರೋಪಿಯಿಂದ ಪೋಲೀಸರು 10 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಪೋಲೀಸರು ಶಂಕಿತನನ್ನು ಅವನ ಮನೆಯಿಂದ ವಶಕ್ಕೆ ಪಡೆದರು. ಸಾಲ ತೀರಿಸಲು ಕಳ್ಳತನ ಮಾಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಆರೋಪಿ ಬ್ಯಾಂಕಿನಿಂದ 15 ಲಕ್ಷ ರೂ.ಗಳನ್ನು ಕಳವುಗೈದಿದ್ದು, ಇದರಲ್ಲಿ ಐದು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ. ನೌಕರರನ್ನು ಚಾಕುವಿನಿಂದ ಬೆದರಿಸಿ ಕಳ್ಳತನ ಮಾಡಿದ್ದಾನೆ. ಆರೋಪಿಯನ್ನು ವಿಚಾರಣೆ ನಡೆಸುತ್ತಿರುವ ಪೋಲೀಸರು, ಇದರಲ್ಲಿ ಬ್ಯಾಂಕ್ ನೌಕರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳ ಮೇಲೆ ಕೇಂದ್ರೀಕೃತವಾದ ತನಿಖೆ ನಿರ್ಣಾಯಕವಾಗಿದೆ. 25 ಸದಸ್ಯರ ವಿಶೇಷ ತನಿಖಾ ತಂಡವು ಶಂಕಿತನನ್ನು ಬಂಧಿಸಿದೆ.






