ನವದೆಹಲಿ: 'ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಮಾಡಬೇಕು ಎಂಬುದು ಸಂವಿಧಾನ ರಚನಾಕಾರರ ಉದ್ದೇಶವಾಗಿತ್ತು. ಸಂವಿಧಾನ ರಚನಾಕಾರರ ಈ ಆಶಯವನ್ನು ಕಾರ್ಯಗತಗೊಳಿಸಲು ನಾವು ಬದ್ಧ' ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುವ ಈ ವೇಳೆ ಅವರು ಮಾತು ಹೇಳಿದ್ದಾರೆ.
'ಯುಸಿಸಿ ಎಂದರೆ ಏನು ಎಂದು ಕೆಲವರು ಯೋಚನೆ ಮಾಡಬಹುದು. ಸಂವಿಧಾನ ರಚನಾಸಭೆಯಲ್ಲಿ ನಡೆದಿದ್ದ ಚರ್ಚೆಗಳನ್ನು ಓದಿದಾಗ ಅವರಿಗೆ ಈ ಕುರಿತು ತಿಳಿಯಲಿದೆ' ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಯುಸಿಸಿ ಜಾರಿಯ ಅಗತ್ಯತೆ ಕುರಿತು ಪರಾಮರ್ಶೆ ಮಾಡುವುದಕ್ಕಾಗಿ ಗುಜರಾತ್ ಸರ್ಕಾರ ಸಮಿತಿಯೊಂದನ್ನು ರಚಿಸಿರುವ ಬೆನ್ನಲ್ಲೇ ಮೋದಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಆದರೆ, ಈ ವಿಚಾರವಾಗಿ ಅವರು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಉತ್ತರಾಖಂಡ, ಯುಸಿಸಿ ಜಾರಿಗೊಳಿಸಿರುವ ಮೊದಲ ರಾಜ್ಯವಾಗಿದೆ.
ದೇಶದಲ್ಲಿ ಯುಸಿಸಿ ಜಾರಿಗೊಳಿಸಬೇಕು ಎಂದು ಸಂವಿಧಾನ ರಚನಾಸಭೆಯಲ್ಲಿ ನಡೆದ ಚರ್ಚೆ ವೇಳೆ ಕೆಲ ಸದಸ್ಯರು ಪ್ರತಿಪಾದಿಸಿದ್ದರು ಎಂಬುದು ದಾಖಲೆಗಳಿಂದ ತಿಳಿದುಬರುತ್ತದೆ.
'ಯುಸಿಸಿಯಿಂದ ತಾರತಮ್ಯ ತೊಲಗಿ, ಏಕತೆ ಸಾಧಿಸಲು ಸಾಧ್ಯವಾಗಲಿದೆ' ಎಂಬುದು ಯುಸಿಸಿ ಪರ ಇದ್ದವರ ವಾದವಾಗಿತ್ತು. ಇಂತಹ ಕ್ರಮದಿಂದ ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂಬ ವಾದವನ್ನೂ ಕೆಲವರು ಮಂಡಿಸಿದ್ದರು.






