ನವದೆಹಲಿ: ಸೋಲಿಗ ಬುಡಕಟ್ಟು ಜನರಿಂದಾಗಿಯೇ, ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಆಕಾಶವಾಣಿಯಲ್ಲಿ ಪ್ರಸಾರವಾಗುವ ಮಾಸಿಕ 'ಮನದ ಮಾತು' ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅವರು, ಮಾರ್ಚ್ ಆರಂಭದಲ್ಲಿ ಹಮ್ಮಿಕೊಳ್ಳಲಾಗುವ ವಿಶ್ವ ವನ್ಯಜೀವಿ ದಿನವನ್ನು ಸಂಭ್ರಮದಿಂದ ಆಚರಿಸಬೇಕು' ಎಂದು ಕೋರಿದ್ದಾರೆ.
'ವನ್ಯಜೀವಿಗಳ ಸಂರಕ್ಷಣೆಯಲ್ಲಿ ನನ್ನ ಬುಡಕಟ್ಟು ಸಹೋದರ ಮತ್ತು ಸಹೋದರಿಯ ಸಕ್ರಿಯ ಪಾಲ್ಗೊಳ್ಳುವಿಕೆ ಇದೆ. ಈ ಕಾರಣದಿಂದ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ' ಎಂದಿದ್ದಾರೆ.
570 ಚದರ ಕಿ.ಮೀ. ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ (ಬಿಆರ್‌ಟಿ) ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ, 40 ಹುಲಿಗಳು ಹಾಗೂ 280ಕ್ಕೂ ಅಧಿಕ ಪ್ರಭೇದದ ಅಪರೂಪದ ಹಕ್ಕಿಗಳು ಇವೆ.
ಸೋಲಿಗರು ಇಲ್ಲಿನ ಮೂಲ ನಿವಾಸಿಗಳಾಗಿದ್ದು, ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿಯೂ ವಾಸಿಸುತ್ತಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಸೋಲಿಗ ಬುಡಕಟ್ಟು ಜನರು ಹುಲಿಯನ್ನು ಆರಾಧಿಸುವ ಕಾರಣ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷ ಬಹುತೇಕ ಸ್ಥಗಿತವಾಗಿದೆ
'ಮನದ ಮಾತು'; ಪ್ರಮುಖಾಂಶಗಳು
* ನಮ್ಮ ಸಂಸ್ಕೃತಿಯಲ್ಲಿ ಪ್ರಾಣಿಗಳು ಹಾಸುಹೊಕ್ಕಾಗಿವೆ. ಅನೇಕ ಪ್ರಾಣಿಗಳನ್ನು ದೇವರುಗಳ ವಾಹನಗಳಾಗಿ ನಾವು ಆರಾಧಿಸುತ್ತೇವೆ
* ಕರ್ನಾಟಕದಲ್ಲಿ ಹುಲಿವೇಷ ಎಂಬ ನೃತ್ಯ ಪ್ರಕಾರವಿದೆ. ತಮಿಳುನಾಡಿನಲ್ಲಿ 'ಪೂಲಿ' ಹಾಗೂ ಕೇರಳದಲ್ಲಿ 'ಪುಲಿಕ್ಕಳಿ' ಎನ್ನಲಾಗುತ್ತದೆ. ಇವು ನಿಸರ್ಗ ಮತ್ತು ವನ್ಯಜೀವಿಗಳೊಂದಿಗಿನ ಮನುಷ್ಯನ ಅವಿನಾಭಾವ ಸಂಬಂಧವನ್ನು ಹೇಳುತ್ತವೆ
* ದೇಶದ ಕೇಂದ್ರ ಭಾಗದಲ್ಲಿ 'ಬಾಘೇಶ್ವರ' ಆರಾಧನೆ ರೂಢಿಯಲ್ಲಿದ್ದರೆ ಮಹಾರಾಷ್ಟ್ರದಲ್ಲಿ 'ವಾಘೋಬ' ಎಂಬ ದೈವವನ್ನು ಪೂಜಿಸುವ ಪದ್ಧತಿ ಇದೆ
* ಅಯ್ಯಪ್ಪ ಸ್ವಾಮಿಗೂ ಹುಲಿಗೂ ನಂಟಿದೆ. ಪಶ್ಚಿಮ ಬಂಗಾಳದ ಸುಂದರಬನ್ಸ್ ಪ್ರದೇಶದಲ್ಲಿ ಬೊನ್‌ಬಿಬಿ ದೇವತೆಯ ವಾಹನ ಹುಲಿ ಎಂಬ ನಂಬಿಕೆ ಇದ್ದು ವ್ಯಾಘ್ರನನ್ನು ಆರಾಧಿಸುತ್ತಾರೆ.




