HEALTH TIPS

ಕಾಲ್ತುಳಿತದಲ್ಲಿ ಸಾವಿರಾರು ಸಾವು: ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿದ ಖರ್ಗೆ

ನವದೆಹಲಿ: ಕುಂಭಮೇಳದಲ್ಲಿ ಜನವರಿ 29ರಂದು ನಡೆದ ಕಾಲ್ತುಳಿತದಲ್ಲಿ 'ಸಾವಿರಾರು' ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ನೀಡಿದ್ದು ಮೇಲ್ಮನೆಯಲ್ಲಿ ಸೋಮವಾರ ಕೋಲಾಹಲಕ್ಕೆ ಕಾರಣವಾಯಿತು.

'ನಿಮ್ಮ ಹೇಳಿಕೆಯನ್ನು ದಾಖಲೆಗಳೊಂದಿಗೆ ದೃಢೀಕರಿಸಬೇಕು' ಎಂದು ಖರ್ಗೆ ಅವರಿಗೆ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಸೂಚಿಸಿದರು.

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾತನಾಡಿದ ಖರ್ಗೆ, 'ಕಾಲ್ತುಳಿತದಲ್ಲಿ ಮೃತಪಟ್ಟ ಸಾವಿರಾರು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ' ಎಂದರು. ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಪ್ರತಿಭಟಿಸಿದರು.

'ಇದು (ಸತ್ತವರ ಸಂಖ್ಯೆಗೆ ಸಂಬಂಧಿಸಿದಂತೆ) ನಾನು ಮಾಡಿರುವ ಅಂದಾಜು. ನನ್ನ ಅಂದಾಜು ಸರಿಯಿಲ್ಲದಿದ್ದರೆ, ನೀವು ಸತ್ಯವನ್ನು ಬಹಿರಂಗಪಡಿಸಬೇಕು. ನನ್ನ ಅಂದಾಜು ತಪ್ಪಾಗಿದ್ದರೆ ಅದನ್ನು ಸರಿಪಡಿಸಲು ಸಿದ್ಧ' ಎಂದು ಖರ್ಗೆ ತಕ್ಷಣವೇ ಹೇಳಿದರು.

'ಯಾರನ್ನೂ ದೂಷಿಸುವ ಉದ್ದೇಶದಿಂದ ಸಾವಿರಾರು ಎಂಬ ಪದ ಬಳಸಿಲ್ಲ. ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಆದರೆ ಎಷ್ಟು ಜನ ಸತ್ತಿದ್ದಾರೆ, ಎಷ್ಟು ಮಂದಿ ಕಾಣೆಯಾಗಿದ್ದಾರೆ ಎಂಬ ಸರಿಯಾದ ಅಂಕಿ-ಅಂಶ ನೀಡಬೇಕು' ಎಂದರು.

'ಮೌನಿ ಅಮಾವಾಸ್ಯೆ' ದಿನ ಸಂಭವಿಸಿದ ಕಾಲ್ತುಳಿತದಲ್ಲಿ 30 ಮಂದಿ ಮೃತಪಟ್ಟಿದ್ದಾಗಿ ಉತ್ತರ ಪ್ರದೇಶ ಸರ್ಕಾರ ಹೇಳಿತ್ತು.

ಚರ್ಚೆಗೆ ವಿಪಕ್ಷ ಪಟ್ಟು: ಕಾಲ್ತುಳಿತ ಮತ್ತು ಸತ್ತವರ ನಿಖರ ಸಂಖ್ಯೆಯ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸಿದ್ದು ಲೋಕಸಭೆಯಲ್ಲೂ ಗದ್ದಲಕ್ಕೆ ಕಾರಣವಾಯಿತು. ಕಾಲ್ತುಳಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ವಿಪಕ್ಷಗಳ ಸದಸ್ಯರು, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಟೀಕಿಸಿದರು. ದುರಂತದ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಒಟ್ಟಾಗಿ ಒತ್ತಾಯಿಸಿದರು.

'ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ನಂಬಿಕೆಯಿರಿಸಿ ಅವರು ಕುಂಭ ಮೇಳಕ್ಕೆ ತೆರಳಿದ್ದರು. ಅಲ್ಲಿ ರಕ್ಷಣೆ ಸಿಗಬಹುದು ಎಂದು ಆಶಿಸಿದ್ದರು. ಆದರೆ ದುರದೃಷ್ಟವಶಾತ್, ಯಾರೂ ಅವರನ್ನು ರಕ್ಷಿಸಲಿಲ್ಲ' ಎಂದು ಡಿಎಂಕೆ ಸಂಸದೆ ಕನಿಮೊಳಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries