ನವದೆಹಲಿ: ಶಿಸ್ತು ಕ್ರಮ ಜರುಗಿಸುವ ಭಾಗವಾಗಿ, ತಪ್ಪು ಮಾಡಿರುವ ಉದ್ಯೋಗಿಯನ್ನು ಕೆಲಸದಿಂದ ತೆಗೆಯುವಾಗ ಸರ್ಕಾರಿ ಸ್ವಾಮ್ಯದ ಉದ್ಯೋಗದಾತರು ಆರೋಪವನ್ನು 'ಸಕಾರಣದ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡುವ' ಮಾನದಂಡಕ್ಕೆ ಬದಲಾಗಿ, 'ಯಾರ ವಾದವು ಸತ್ಯವಾಗಿರುವ ಸಾಧ್ಯತೆ ಹೆಚ್ಚಿದೆ' ಎನ್ನುವುದನ್ನು ಪರಿಶೀಲಿಸುವ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ಸಕಾರಣದ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡುವ' ಮಾನದಂಡವನ್ನು ಕ್ರಿಮಿನಲ್ ಪ್ರಕರಣಗಳ ವಿಚಾರಣೆಯಲ್ಲಿ ಪಾಲಿಸಲಾಗುತ್ತದೆ.
ನ್ಯಾಯಮೂರ್ತಿಗಳಾದ ಜೆ.ಕೆ. ಮಾಹೇಶ್ವರಿ ಮತ್ತು ಸಂದೀಪ್ ಮೆಹ್ತಾ ಅವರು ಇರುವ ವಿಭಾಗೀಯ ಪೀಠವು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಉದ್ಯೋಗಿಯಾಗಿದ್ದ ಪ್ರದೀಪ್ ಕುಮಾರ್ ಬ್ಯಾನರ್ಜಿ ಎನ್ನುವವರ ವಜಾ ಆದೇಶವನ್ನು ರದ್ದುಪಡಿಸಿ 2012ರಲ್ಲಿ ಕಲ್ಕತ್ತ ಹೈಕೋರ್ಟ್ ನೀಡಿದ್ದ ಆದೇಶವನ್ನು ಅಸಿಂಧುಗೊಳಿಸಿದೆ.
ಆದರೆ, ಸಂಬಂಧಿತ ಕ್ರಿಮಿನಲ್ ಪ್ರಕರಣವೊಂದರಲ್ಲಿ ಬ್ಯಾನರ್ಜಿ ಅವರು ದೋಷಮುಕ್ತ ಆಗಿದ್ದರೂ ಅವರನ್ನು ವಜಾಗೊಳಿಸಿದ್ದು ಸರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಗಳನ್ನು ಸಕಾರಣದ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡಬೇಕಾಗುತ್ತದೆಯಾದರೂ, ಅದಕ್ಕೆ ಸಂಬಂಧಿಸಿದ ಶಿಸ್ತುಕ್ರಮದ ವಿಚಾರಣೆಗಳಲ್ಲಿ ಆ ರೀತಿ ಸಾಬೀತು ಮಾಡಬೇಕಾದ ಅಗತ್ಯವಿಲ್ಲ ಎಂದು ವಿಭಾಗೀಯ ಪೀಠವು ಹೇಳಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪು ಸರ್ಕಾರಿ ಸ್ವಾಮ್ಯದ ಉದ್ಯೋಗದಾತರಿಗೆ ಹೆಚ್ಚಿನ ಬಲ ತಂದುಕೊಡಲಿದೆ ಎಂದು ವಿಶ್ಲೇಷಿಸಲಾಗಿದೆ.
'ಕ್ರಿಮಿನಲ್ ಪ್ರಕರಣಗಳ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ತನ್ನ ಆರೋಪವನ್ನು ಸಕಾರಣದ ಅನುಮಾನಗಳಿಗೆ ಎಡೆಯಿಲ್ಲದಂತೆ ಸಾಬೀತು ಮಾಡಬೇಕಾದ ಹೊಣೆ ಹೊತ್ತಿರುತ್ತದೆ ಎನ್ನುವುದು ಒಪ್ಪಿತ ಸಂಗತಿ. ಆದರೆ ಶಿಸ್ತುಕ್ರಮಕ್ಕೆ ಸಂಬಂಧಿಸಿದ ವಿಚಾರಣೆಗಳಲ್ಲಿ ಇಲಾಖೆಯ ಮೇಲಿನ ಹೊಣೆಯು ಸೀಮಿತವಾಗಿರುತ್ತದೆ, ಎರಡು ವಾದಗಳಲ್ಲಿ ಯಾವ ವಾದವು ಸತ್ಯವಾಗಿರುವ ಸಾಧ್ಯತೆ ಹೆಚ್ಚಿದೆ ಎಂಬುದರ ಆಧಾರದಲ್ಲಿ ಅದು ತನ್ನ ಆರೋಪವನ್ನು ಸಾಬೀತು ಮಾಡಬೇಕಾಗುತ್ತದೆ' ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ.




.jpg)
