ನವದೆಹಲಿ: ಹಿರಿಯ ಅಧಿಕಾರಿಗಳ ವಾರ್ಷಿಕ ಗೋಪ್ಯ ವರದಿಗಳನ್ನು ತಿರುಚಿದ ಆರೋಪದಡಿ ಕರಾವಳಿ ಪಡೆಯ ಮಾಜಿ ಮಹಾ ನಿರ್ದೇಶಕ(ಡಿ.ಜಿ) ಕೆ. ನಟರಾಜನ್ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಹಿರಿಯ ಅಧಿಕಾರಿಗಳ ವೈಯುಕ್ತಿಕ ದಾಖಲೆಗಳಲ್ಲಿನ ಮಾಹಿತಿಯನ್ನು ನಟರಾಜನ್ ಅವರು ತಿರುಚಿರುವ ಬಗ್ಗೆ ರಕ್ಷಣಾ ಸಚಿವಾಲಯವು ಸಿಬಿಐಗೆ ಮಾಹಿತಿ ನೀಡಿತ್ತು. ಪ್ರಕರಣದ ಬಗ್ಗೆ ಸಿಬಿಐ ಕಳೆದ ಏಪ್ರಿಲ್‌ನಿಂದ ತನಿಖೆ ನಡೆಸುತ್ತಿದೆ.
10 ತಿಂಗಳು ಪ್ರಾಥಮಿಕ ತನಿಖೆ ನಡೆಸಿರುವ ಸಿಬಿಐ, ದಾಖಲೆಗಳಲ್ಲಿನ ವ್ಯತ್ಯಾಸ ಮತ್ತು ಹಲವು ಅಧಿಕಾರಿಗಳ 'ನಾನ್ ಇನಿಷಿಯೇಷನ್ ಸರ್ಟಿಫಿಕೇಟ್' ಕಾಣೆಯಾಗಿರುವುದನ್ನು ಪತ್ತೆಹಚ್ಚಿದೆ.
ತಮ್ಮ ವಾರ್ಷಿಕ ವರದಿಯಲ್ಲಿನ ಮಾಹಿತಿಯನ್ನು ತಿರುಚುವ ಮೂಲಕ ಮುಂದಿನ ಸಂಭವನೀಯ ಪದೋನ್ನತಿಯಿಂದ ವಂಚಿತವಾಗುವಂತೆ ಮಾಡಲಾಗಿದೆ ಎಂದು ಆರೋಪಿಸಿ ಕರಾವಳಿ ಪಡೆಯ ಐಜಿ ರಾಕೇಶ್ ಪಾಲ್ ಅವರು 2021 ಜೂನ್‌ನಲ್ಲಿ ರಕ್ಷಣಾ ಸಚಿವಾಲಯಕ್ಕೆ ದೂರು ನೀಡಿದ್ದರು.
2014 ಮತ್ತು 2015ನೇ ಸಾಲಿನ 'ಗ್ರೇಡಿಂಗ್'ನಲ್ಲಿ ಇಬ್ಬರು ಅಧಿಕಾರಿಗಳಿಗೆ ಹೆಚ್ಚು ಅಂಕಗಳನ್ನು ನೀಡಲಾಗಿದೆ ಮತ್ತು ರಾಕೇಶ್ ಪಾಲ್ ಅವರ ಅಂಕಗಳನ್ನು ಕಡಿತಗೊಳಿಸಿರುವುದು ಸಿಬಿಐ ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ.






