HEALTH TIPS

ರಾಜ್ಯಗಳು ತೆರಿಗೆ ಕೊಡುಗೆಯ ಅನುಸಾರ ಅನುದಾನಕ್ಕೆ ಬೇಡಿಕೆ ಇಡುವುದು ಸಣ್ಣತನ: ಗೋಯಲ್

 ಮುಂಬೈ: ಕೇಂದ್ರ ಸರ್ಕಾರದ ಆದಾಯಕ್ಕೆ ನೀಡುವ ತೆರಿಗೆ ಕೊಡುಗೆಗೆ ಅನುಸಾರವಾಗಿ, ಅನುದಾನ ಪಡೆಯಲು ಕೆಲವು ರಾಜ್ಯಗಳು ಬೇಡಿಕೆ ಇಡುತ್ತಿರುವುದು ದುರದೃಷ್ಟಕರ ಹಾಗೂ ಸಣ್ಣತನದ ಚಿಂತನೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಟೀಕಿಸಿದ್ದಾರೆ.

ದೇಶವು ಅಭಿವೃದ್ಧಿ ಹೊಂದಬೇಕಾದರೆ, ಈಶಾನ್ಯದ ಎಂಟು ರಾಜ್ಯಗಳು ಹಾಗೂ ಪೂರ್ವಕ್ಕಿರುವ ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳೂ ಅಭಿವೃದ್ಧಿ ಹೊಂದಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ನಿಲುವಾಗಿದೆ ಎಂದು ಹೇಳಿದ್ದಾರೆ.


ನಗರದಲ್ಲಿ ಶನಿವಾರ ಆಯೋಜಿಸಿದ್ದ 'ರಾಷ್ಟ್ರೀಯ ಏಕಾತ್ಮತ ಯಾತ್ರೆ 2025' ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ, ಮಹಾಭಾರತದ ಅರ್ಜುನನ ಗುರಿಯಂತೆ, ಪ್ರಧಾನಿ ಮೋದಿ ಸರ್ಕಾರದ 'ಲೇಸರ್ ಫೋಕಸ್' ‌ಕಳೆದ 11 ವರ್ಷಗಳಿಂದ ಈಶಾನ್ಯ ಮತ್ತು ಪೂರ್ವ ರಾಜ್ಯಗಳ ಮೇಲಿದೆ ಎಂದಿದ್ದಾರೆ.

'ದುರದೃಷ್ಟವೆಂಬಂತೆ, ಕೆಲವು ರಾಜ್ಯಗಳು ಮತ್ತು ಕೆಲವು ನಾಯಕರು... ನಾನಿದನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಎರಡೂವರೆ ವರ್ಷ ಅಧಿಕಾರದಲ್ಲಿದ್ದ ಸರ್ಕಾರದ ಕೆಲವು ನಾಯಕರು, ಮಹಾರಾಷ್ಟ್ರದಿಂದ ಪಾವತಿಯಾದ ತೆರಿಗೆಯನ್ನು ಲೆಕ್ಕಹಾಕುತ್ತಿದ್ದರು. ಅದೇರೀತಿ ಅನುದಾನ ರೂಪದಲ್ಲಿ ಕೇಂದ್ರವು ಇಂತಿಷ್ಟನ್ನು ಹಿಂತಿರುಗಿಸಬೇಕು ಎಂದು ಬೇಡಿಕೆ ಇಡುತ್ತಿದ್ದರು' ಎಂದು ಕುಟುಕಿದ್ದಾರೆ.

ಆ ಮೂಲಕ, ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಹಿಂದಿನ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರವನ್ನು ಟೀಕಿಸಿದ್ದಾರೆ. ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ, ಕಾಂಗ್ರೆಸ್‌, ಶರದ್‌ ಪವಾರ್‌ ಅವರ ಎನ್‌ಸಿಪಿ ಪಕ್ಷಗಳು ಎಂವಿಎ ಸರ್ಕಾರದ ನೇತೃತ್ವ ವಹಿಸಿದ್ದವು.

ಮುಂಬೈ ಉತ್ತರ ಕ್ಷೇತ್ರದಿಂದ ಸಂಸತ್‌ ಪ್ರವೇಶಿಸಿರುವ ಗೋಯಲ್‌, 'ಕರ್ನಾಟಕ, ತಮಿಳುನಾಡು, ತೆಲಂಗಾಣ ಮುಂತಾದ ಕೆಲವು ರಾಜ್ಯಗಳು ತಾವು ಕಟ್ಟಿರುವ ತೆರಿಗೆಯ ಮೊತ್ತವನ್ನು ಮರಳಿ ಪಡೆಯಲು ಬೇಡಿಕೆ ಇಡುತ್ತಿವೆ. ಇದಕ್ಕಿಂತ ಸಣ್ಣತನ ಚಿಂತನೆ ಇರಲು ಸಾಧ್ಯವಿಲ್ಲ. ಇದಕ್ಕಿಂತ ದುರದೃಷ್ಟವೂ ಇರಲಾರದು' ಎಂದು ಟೀಕಿಸಿದ್ದಾರೆ.

ಹಾಗೆಯೇ, 'ಸದ್ಯ ಮಹಾರಾಷ್ಟ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಈಶಾನ್ಯ ಭಾರತದ ವಿಚಾರದಲ್ಲಿ ಸಂವೇದನಾಶೀಲವಾಗಿ ಇರುವುದರಿಂದ ಆ ಬಗ್ಗೆ (ತೆರಿಗೆ ಕುರಿತು) ಚಿಂತಿಸುವ ಅಗತ್ಯವಿಲ್ಲ' ಎಂದು ಹೇಳಿಕೊಂಡಿದ್ದಾರೆ.

ಮೋದಿ ನಾಯಕತ್ವದಲ್ಲಿ, ಈಶಾನ್ಯ ರಾಜ್ಯಗಳ ರಾಜಧಾನಿಗಳನ್ನು ರೈಲ್ವೆ ಮೂಲಕ ಸಂಪರ್ಕಿಸುವ ಕಾರ್ಯ ಪ್ರಗತಿಯಲ್ಲಿದೆ. ಹೆದ್ದಾರಿಗಳ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಧಾನಿ ಅವರು ಈಶಾನ್ಯ ರಾಜ್ಯಗಳಿಗೆ 65ಕ್ಕೂ ಹೆಚ್ಚು ಸಲ ಭೇಟಿ ನೀಡಿದ್ದಾರೆ ಎಂದ ಗೋಯಲ್‌, ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುವಂತೆ ಕರೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries