ನವದೆಹಲಿ: 'ನಿಮಗೆ ಹಿತ ಎನಿಸುವ ಯಾವುದೇ ಭಾಷೆಯಲ್ಲಿ ನೀವು ಮಾತನಾಡಿ, ಆದರೆ, ನೀವು ಹೇಳಲು ಹೊರಟ ವಿಚಾರಗಳನ್ನು ಗಟ್ಟಿಯಾಗಿ ಹೇಳಿ'- ಹೀಗೆಂದು ಕಾಂಗ್ರೆಸ್ ಸಂಸದರಿಗೆ ಲೋಕಸಭೆಯಲ್ಲಿನ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಲಹೆ ನೀಡಿದ್ದಾರೆ.
ಮಾರ್ಚ್ 10ರಿಂದ ಆರಂಭವಾಗಲಿರುವ ಎರಡನೇ ಹಂತದ ಬಜೆಟ್ ಅಧಿವೇಶನದಲ್ಲಿ ಸಂಸದರ ಹಾಜರಾತಿ ಮೇಲೆ ಕಟ್ಟುನಿಟ್ಟಾಗಿ ಕಣ್ಗಾವಲು ವಹಿಸಲಾಗುವುದು.
ಬಜೆಟ್ ಅಧಿವೇಶನದ ಮೊದಲ ಹಂತವು ಕಡಿಮೆ ಅವಧಿಯದ್ದಾಗಿತ್ತು. ಹೀಗಾಗಿ, ಪಕ್ಷದ ನಾಯಕತ್ವವು ಪಕ್ಷದ ಸಂಸದರ ಹಾಜರಾತಿಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಪಕ್ಷದ ಸಂಸದರಿಗೆ ರಾಹುಲ್ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ಕೆ.ಸಿ. ವೇಣುಗೋಪಾಲ್, ಮಾಣಿಕ್ಯಂ ಟ್ಯಾಗೊರ್, ಗೌರವ್ ಗೊಗೊಯಿ ಹಾಗೂ ಕೊಡಿಕ್ಕುನಿಲ್ ಸುರೇಶ್ ಸೇರಿದಂತೆ ಹಿರಿಯ ಸಂಸದರು ಭಾಗವಹಿಸಿದ್ದರು ಎಂದು ಗೊತ್ತಾಗಿದೆ.
ಉತ್ತಮವಾಗಿ ಮಾತನಾಡುವ ಸಂಸದರಿಗೆ 2ನೇ ಹಂತದ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಸಿಗಲಿದೆ. ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಪಕ್ಷದ 27 ಸಂಸದರು ಭಾಗಿಯಾಗಿದ್ದರು ಎಂದು ರಾಹುಲ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.




