ಬೋಪಾಲ್: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ವಾಹನ ದಟ್ಟಣೆ ಉಂಟಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಮೋಹನ್ ಯಾದವ್, ಮುಂದಿನ ಕೆಲವು ದಿನಗಳ ಕಾಲ ಮಧ್ಯಪ್ರದೇಶ ಮಾರ್ಗದ ಮೂಲಕ ಪ್ರಯಾಗ್‌ರಾಜ್‌ಗೆ ತೆರಳಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಪಿಟಿಐ ಜತೆ ಮಾತನಾಡಿರುವ ಅವರು, 'ಕಳೆದ ಕೆಲವು ದಿನಗಳಿಂದ ಜಬಲ್ಪುರ, ಕತ್ನಿ, ರೇವಾ, ಸತ್ನಾ, ಸಿಯೋನಿ, ಮೈಹರ್ ಜಿಲ್ಲೆಗಳ ಮೂಲಕ ಹಲವು ವಾಹನಗಳು ಹಾದುಹೋಗುತ್ತಿದ್ದು, ಭಾರಿ ದಟ್ಟಣೆ ಉಂಟಾಗುತ್ತಿದೆ. ಮುಂದಿನ ಕೆಲವು ದಿನ ಈ ಮಾರ್ಗದ ಮೂಲಕ ಪ್ರಯಾಗ್‌ರಾಜ್‌ಗೆ ತೆರಳಬೇಡಿ. ಹೊರಡುವ ಮುನ್ನ ಗೂಗಲ್ ಮ್ಯಾಪ್‌ನಲ್ಲಿ ಪರೀಕ್ಷಿಸಿಕೊಳ್ಳಿ, ಟ್ರಾಫಿಕ್ ಹೆಚ್ಚಿರುವ ದಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ ಎಂದು ಜನರಲ್ಲಿ ವಿನಂತಿಸಿಕೊಳ್ಳುತ್ತೇನೆ' ಎಂದಿದ್ದಾರೆ.
'ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಜನರು ನಮ್ಮ ರಾಜ್ಯದ ಮೂಲಕ ಸಾಗುತ್ತಿರುವುದು ಸಂತೋಷದ ವಿಷಯ, ಆದರೆ ವ್ಯವಸ್ಥೆ ಮಾಡುವುದೇ ಸವಾಲಿನ ಕೆಲಸವಾಗಿದೆ. ಪ್ರಯಾಗ್‌ರಾಜ್ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ. ನಮ್ಮ ಸರ್ಕಾರ ಪ್ರಯಾಣಿಕರಿಗೆ ಆಹಾರ, ನೀರು ಸೇರಿ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ. ನಮ್ಮೊಂದಿಗೆ ಕೆಲವು ಸಾಮಾಜಿಕ ಸಂಸ್ಥೆಗಳೂ ಕೈಜೋಡಿಸಿವೆ' ಎಂದು ಮಾಹಿತಿ ನೀಡಿದ್ದಾರೆ.




