ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದತ್ತ ಸಾಗಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಈ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಫಲಿತಾಂಶ ಖುಷಿ ತಂದಿದೆ.
ದೆಹಲಿಯಲ್ಲಿ ಬಲಿಷ್ಠ ಸರ್ಕಾರ ಅಧಿಕಾರದಲ್ಲಿ ಇರುವುದು ಅವಶ್ಯಕ. ಜನರಿಗೆ ಉತ್ತಮ ಆಡಳಿತ ನೀಡುವ ಹಾಗೂ ಜನರಿಗೆ ಸೇವೆ ಸಲ್ಲಿಸುವ ಸರ್ಕಾರ ಅಧಿಕಾರದಲ್ಲಿಯುವುದು ಅತ್ಯಗತ್ಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುವುದರಿಂದ ದೆಹಲಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
2047ರ ವೇಳೆಗೆ ವಿಕಸಿತ ಭಾರತ ಗುರಿಯನ್ನು ಸಾಧಿಸಲು ರಾಷ್ಟ್ರ ರಾಜಧಾನಿಯ ಪಾತ್ರವು ಇದೆ. ದೆಹಲಿ ಜನರ ಅಭಿವೃದ್ಧಿ ಹಾಗೂ ಹಿತದೃಷ್ಟಿಯಿಂದ ಸೇವೆ ಸಲ್ಲಿಸಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ದೆಹಲಿ ಸೇರಿದಂತೆ ರಾಷ್ಟ್ರದ ಬೆಳವಣಿಗೆ ಆಗಬೇಕು. ಮೂಲಸೌಕರ್ಯ, ಶಿಕ್ಷಣ, ಆಸ್ಪತ್ರೆ ಮತ್ತು ಜನರ ಆರೋಗ್ಯ ರಕ್ಷಣೆಗೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಆಡಳಿತವನ್ನು ಬಿಜೆಪಿ ಒದಗಿಸುತ್ತದೆ ಎಂದು ಸೀತಾರಾಮನ್ ಭರವಸೆ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗದ ಈಗಿನ ಟ್ರೆಂಡ್ (ಮಧ್ಯಾಹ್ನ 2.45) ಪ್ರಕಾರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 47 ಹಾಗೂ ಎಎಪಿ 23 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.




