HEALTH TIPS

Jaipur Literature Festival 2025: ಸಾಹಿತ್ಯದ 'ವಸಂತ'ದಲ್ಲಿ ಬಹುತ್ವದ ಘಮ

ಜೈಪುರ: ಸಾಹಿತ್ಯ-ಚಿಂತನೆಯ ನೆಪದಲ್ಲಿ ಜಗತ್ತಿನ ವಿದ್ಯಮಾನಗಳ ಚರ್ಚೆಗೆ ವೇದಿಕೆಯಾಗುವ ಜೈಪುರ ಸಾಹಿತ್ಯ ಉತ್ಸವದ 18ನೇ ಆವೃತ್ತಿ ಸೋಮವಾರ ಸಂಪನ್ನಗೊಂಡಿತು.

ಜವಾಹರಲಾಲ್ ನೆಹರು ರಸ್ತೆಯ ಕ್ಲಾರ್ಕ್ಸ್ ಆಮೇರ್ ಹೋಟೆಲ್‌ನಲ್ಲಿ ಐದು ದಿನ ಚಿಂತಕರು ಮತ್ತು ಬರಹಗಾರರ ವಿಚಾರಧಾರೆಗೆ, ಮಾಹಿತಿ ವಿನಿಮಯಕ್ಕೆ ಹೊಸ ವೇದಿಕೆಗಳನ್ನು ಕಲ್ಪಿಸಿದ ಉತ್ಸವ ರಾಜಕಾರಣಿಗಳಿಂದಲೂ ವಿವಾದಗಳಿಂದಲೂ ದೂರ ಉಳಿಯಿತು.

ಪ್ರದೇಶ, ಲಿಂಗ, ಭಾಷೆ, ವರ್ಣ ಬೇರೆಬೇರೆಯಾಗಿದ್ದರೂ ಜ್ಞಾನದಾಹದ ಒಂದೇ ಗುರಿಯೊಂದಿಗೆ ಬಂದಿದ್ದ ವಿದೇಶದ ಬರಹಗಾರರು ಮತ್ತು ಪ್ರತಿನಿಧಿಗಳನ್ನು ಒಳಗೊಂಡು ಸಾಹಿತ್ಯ ಉತ್ಸವ ಪ್ರತಿದಿನವೂ ಜನಜಾತ್ರೆಯಾಗಿತ್ತು. ಪುಸ್ತಕ ಮೇಳದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಕಾಲಿಡಲು ಜಾಗವಿಲ್ಲದ ಸ್ಥಿತಿ, ನಾಲ್ಕು ಬಿಲ್ಲಿಂಗ್ ಕೌಂಟರ್‌ಗಳಲ್ಲಿ ಸ್ವಯಂಸೇವಕರಿಗೆ ಪ್ರತಿನಿಮಿಷವೂ ಬಿಡುವಿಲ್ಲದ ಕೆಲಸ.

ಸಂಗೀತ, ಸಾಹಿತ್ಯ, ಸಿನಿಮಾ, ರಂಗಭೂಮಿ, ಕ್ರೀಡೆ, ವಿಜ್ಞಾನ, ಪರಿಸರ, ಯುದ್ಧ ಮುಂತಾದ 90ಕ್ಕೂ ಹೆಚ್ಚು ವಿಷಯಗಳ ಚರ್ಚೆಗೆ ಸಾಕ್ಷಿಯಾದ ಉ‌ತ್ಸವ ಪುಸ್ತಕ ಪ್ರಕಾಶಕರು ಮತ್ತು ಬರಹಗಾರರ ಮುಖಾಮುಖಿ ಮತ್ತು ಒಪ್ಪಂದಗಳಿಗೆ ಸಹಿ ಮಾಡುವ ತಾಣವೂ ಆಯಿತು. 'ಬಸಂತ್‌' ಮಾಸದ ಸಂಭ್ರಮದಲ್ಲಿರುವ ಜೈಪುರದಲ್ಲಿ ಉತ್ಸವದ ಕೊನೆಯ ದಿನ ಆರಂಭಗೊಂಡದ್ದು ಹಿಂದುಸ್ತಾನಿ ಸಂಗೀತದೊಂದಿಗೆ. ದಿನದ ಗೋಷ್ಠಿಗಳು ಬದುಕು, ಕಲೆ, ಅಜಂತಾ ಗುಹೆಗಳ ಕೌತುಕ, ಅಮೆರಿಕದಲ್ಲಿ ಭಾರತೀಯರ ಪ್ರತಿಭೆ, ರಾಜಾಡಳಿತ ಮೊದಲಾದ ಪುಸ್ತಕಗಳ ಕುರಿತ ಚರ್ಚೆಗೆ ವೇದಿಕೆಯಾದವು.

'ಬೈಠಕ್‌'ನಲ್ಲಿ ನಡೆದ 'ಅಮೆರಿಕದಲ್ಲಿ ಭಾರತದ ಪ್ರತಿಭೆಗಳು' ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಲೇಖಕಿ ಮೀನಾಕ್ಷಿ ನರುಲಾ ಅಹಮ್ಮದ್, ಉತ್ಸಾಹ ಮತ್ತು ಬದ್ಧತೆ ಇಲ್ಲದೆ ಯಾವುದೂ ಸಾಧ್ಯವಿಲ್ಲ. ಅಮೆರಿಕದಲ್ಲಿ ಹೆಸರು ಮಾಡಿರುವ ಭಾರತೀಯರೆಲ್ಲರೂ ಉತ್ಸಾಹಿಗಳು ಎಂದರು.

ಗುಹಾಚಿತ್ರಗಳ ಸೊಬಗಿನ ಬಣ್ಣನೆ:

ಅಜಂತಾ ಗುಹೆಗಳಲ್ಲಿರುವ ಪ್ರಾಚೀನ ಬೌದ್ಧ ಕಲೆಯ ಕುರಿತು 'ದರ್ಬಾರ್‌ ಹಾಲ್‌'ನಲ್ಲಿ ನಡೆದ ಸಂವಾದಲ್ಲಿ ಗುಹಾಚಿತ್ರಗಳ ಸೊಬಗನ್ನು ಕಲಾ ಇತಿಹಾಸಕಾರ ಬಿನೋಯ್ ಕೆ ಬೆಹ್ಲ್‌ ಬಣ್ಣಿಸಿದರು.

ತಾವೇ ಸೆರೆಹಿಡಿದಿರುವ ಚಿತ್ರಗಳನ್ನು ಪ್ರದರ್ಶಿಸಿ ವಿವರಣೆ ನೀಡಿದ ಅವರು ಆಧುನಿಕ ಕಲೆಯ ತಂತ್ರಗಳು ಅಜಂತಾ ಗುಹೆಗಳ ಪೇಂಟಿಂಗ್‌ಗಳಲ್ಲಿ ವ್ಯಕ್ತವಾಗಿದ್ದು ಬೌದ್ಧ ತತ್ವಗಳೆಲ್ಲವೂ ಅದರಲ್ಲಿ ಪಡಿಮೂಡಿವೆ ಎಂದರು.

'ಅಳುವ ಅವಕಾಶ ಕೈಚೆಲ್ಲುವುದಿಲ್ಲ'

'ಅಳು ಕೂಡ ನಗುವಿನಷ್ಟೇ ಸುಂದರ. ಹೀಗಾಗಿ ಅಳುವುದಕ್ಕೆ ಸಿಗುವ ಯಾವ ಅವಕಾಶವನ್ನೂ ನಾನು ಕೈಚೆಲ್ಲುವುದಿಲ್ಲ..' ಬರಹಗಾರ ನಟ ರಂಗಕರ್ಮಿ ಮಾನವ್ ಕೌಲ್ ಆಡಿದ ಈ ಮಾತು ಸಭಿಕರನ್ನು ಭಾವುಕರನ್ನಾಗಿಸಿತು.

'ಫ್ರಂಟ್‌ ಲಾನ್‌'ನಲ್ಲಿ ನಡೆದ ಗೋಷ್ಠಿಯಲ್ಲಿ ಮಾತನಾಡಿದ ಅವರು 'ಸ್ಪೇನ್‌ಗೆ ತೆರಳಿದ್ದಾಗ ಸಣ್ಣ ಕೊಠಡಿಯಲ್ಲಿ ನಡೆಯುವ ಭಾವುಕವಾದ ನೃತ್ಯವೊಂದನ್ನು ನೋಡಿ ಅತ್ತುಬಿಟ್ಟೆ' ಎಂದರು.

ಮಾನವ ಸಂಬಂಧಗಳಲ್ಲಿ ಲೈಂಗಿಕತೆಗೆ ಮಹತ್ವವಿದೆ. ದೈಹಿಕ ಸಂಬಂಧದಲ್ಲಿ ಮಾನಸಿಕ ಸಂಬಂಧವನ್ನು ಪರಿಪೂರ್ಣವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಅದು ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಹಿಟ್ಲರ್‌ನ ವೈಯಕ್ತಿಕ ಸಂಬಂಧಗಳು ಹದಗೆಟ್ಟಿದ್ದವು. ಅದು ಆತನ ವರ್ತನೆಯಲ್ಲೂ ಪ್ರತಿಫಲನಗೊಳ್ಳುತ್ತಿತ್ತು ಎಂದು ಮಾನವ್ ಅಭಿಪ್ರಾಯಪಟ್ಟರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries