HEALTH TIPS

ಒಡಿಶಾದ KIITಯಲ್ಲಿ ನೇಪಾಳಿ ವಿದ್ಯಾರ್ಥಿನಿ ಆತ್ಮಹತ್ಯೆ: ಕ್ಯಾಂಪಸ್‌ನಲ್ಲಿ ಕೋಲಾಹಲ!

ಭುವನೇಶ್ವರ: ಒಡಿಶಾದ ಭುವನೇಶ್ವರದಲ್ಲಿನ ಕಳಿಂಗಾ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆಯಲ್ಲಿ (KIIT) ನೇಪಾಳಿ ವಿದ್ಯಾರ್ಥಿನಿ ಭಾನುವಾರ ಸಂಜೆ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

KIITಯಲ್ಲಿ ಮೂರನೇ ವರ್ಷದಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ನೇಪಾಳಿ ವಿದ್ಯಾರ್ಥಿನಿ ಪ್ರಕೃತಿ ಲಾಮ್ಸಾಲ್ ಆತ್ಮಹತ್ಯೆ ಮಾಡಿಕೊಂಡವರು.

ಈ ಘಟನೆಯಿಂದ KIITಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ನ್ಯಾಯಕ್ಕಾಗಿ ಆಗ್ರಹಿಸಿ 500 ಕ್ಕೂ ಹೆಚ್ಚು ನೇಪಾಳಿ ವಿದ್ಯಾರ್ಥಿಗಳು ಸಂಸ್ಥೆಯ ವಿರುದ್ಧ ಭಾನುವಾರ ರಾತ್ರಿಯೇ ದಿಢೀರ್ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದರಿಂದ ಕುಪಿತಗೊಂಡ KIIT ಆಡಳಿತ ಮಂಡಳಿ, ಪ್ರತಿಭಟನೆ ನಡೆಸಲು ಮುಂದಾದ ನೇಪಾಳಿ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಖಾಲಿ ಮಾಡಿಸಿ ವಾಪಸ್ ಊರಿಗೆ ಹೋಗಿ ಎಂದು ಎಚ್ಚರಿಸಿದ್ದಾರೆ.

ಅಲ್ಲದೇ ಅವರೆಲ್ಲರನ್ನೂ ಬಸ್ ಹತ್ತಿಸಿ ಭುವನೇಶ್ವರ ರೈಲು ನಿಲ್ದಾಣದಲ್ಲಿ ಇಳಿಸಿದ್ದಾರೆ. ಆತಂಕಗೊಂಡಿರುವ ಹಲವು ನೇಪಾಳಿ ವಿದ್ಯಾರ್ಥಿಗಳು ರೈಲಿನಲ್ಲಿ ಊರಿಗೆ ತೆರಳಲಾಗದೇ ಕ್ಯಾಂಪಸ್ ಹೊರಗಡೆಯೇ ಅತಂತ್ರರಾಗಿದ್ದಾರೆ.

ಈ ಕುರಿತು ಎಚ್ಚೆತ್ತುಕೊಂಡು ಭಾರತದಲ್ಲಿನ ನೇಪಾಳಿ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು, KIITಯಲ್ಲಿ ನಡೆದ ದುರಾದೃಷ್ಟಕರ ಘಟನೆ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದ್ದು, ನಮ್ಮ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಭುವನೇಶ್ವರಕ್ಕೆ ಕಳುಹಿಸಿ ಕೊಡಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಕೃತಿಗೆ ಕ್ಯಾಂಪಸ್‌ನಲ್ಲಿ ಸ್ಥಳೀಯ ವಿದ್ಯಾರ್ಥಿಯೊಬ್ಬ ಪೀಡಿಸುತ್ತಿದ್ದ. ಆದರೆ, ಪೃಕೃತಿ ಇನ್ನೊಬ್ಬ ಹುಡುಗನನ್ನು ಇಷ್ಟಪಟ್ಟಿದ್ದರು. ಪೀಡಿಸುತ್ತಿದ್ದ ಸ್ಥಳೀಯ ವಿದ್ಯಾರ್ಥಿಯ ಕಿರುಕುಳಕ್ಕೆ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಮಾನದ ಮೂಲಕ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಈ ಕುರಿತು ಇನ್ಫೋಸಿಟಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಸಹೋದರಿ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಭುವನೇಶ್ವರ್ ಡಿಸಿಪಿ ಪಿನಾಕ್ ಮಿಶ್ರಾ ತಿಳಿಸಿದ್ದಾರೆ.

'ಆರೋ‍ಪಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆಂದು ನಾವು ಹೇಳಿದರೂ, ಕಾನೂನನ್ನು ಕೈಗೆತ್ತಿಕೊಳ್ಳಲು ಮತ್ತು ಗಲಭೆ ಸೃಷ್ಟಿಸಲು ನೇಪಾಳಿ ವಿದ್ಯಾರ್ಥಿಗಳು ಮುಂದಾದರು. ಇದರಿಂದ ತಕ್ಷಣದ ಕ್ರಮವನ್ನು ಮಾತ್ರ ನಾವು ತೆಗೆದುಕೊಂಡಿದ್ದೇವೆ. ಸದ್ಯಕ್ಕೆ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ' ಎಂದು KIIT ಕುಲಸಚಿವರು ತಿಳಿಸಿದ್ದಾರೆ.

'ಘಟನೆ ಸಿಎಂ ಅವರ ಗಮನಕ್ಕೂ ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ವಿಶೇಷ ಬಸ್‌ಗಳಲ್ಲಿ ನೇಪಾಳಿ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಸೂಚಿಸಲಾಗಿದೆ' ಎಂದು ಒಡಿಶಾ ಉನ್ನತ ಶಿಕ್ಷಣ ಸಚಿವ ಸೂರ್ಯವಂಶಿ ಸೂರಜ್ ಅವರು ಹೇಳಿದ್ದಾರೆ.

ಕಳಿಂಗಾ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ನೇಪಾಳಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries