ಹಾಥರಸ್ : ದೇಶದ ರೈತರ ಹಿತ ಕಾಯಲು ಕೇಂದ್ರ ಸರ್ಕಾರ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಸಂಬಂಧ ಕಾನೂನು ಖಾತ್ರಿ ನೀಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ರಾಷ್ಟ್ರವ್ಯಾಪಿ ಚಳವಳಿಗೆ ಕರೆ ನೀಡಿದ್ದಾರೆ.
ಹಾಥರಸ್‌ನ ಸಿಕಂದರಾವ್ ಪಟ್ಟಣದಲ್ಲಿ ಬುಧವಾರ ನಡೆದ 'ರೈತರ ಮಹಾಪಂಚಾಯತ್'ನಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. 'ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡದಂತೆ ಮತ್ತು ಕುಟುಂಬದ ಒಬ್ಬ ಸದಸ್ಯರಾದರೂ ಚಳವಳಿಯಲ್ಲಿ ಭಾಗವಹಿಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.
ಬಿಹಾರದ ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುತ್ತಿಲ್ಲ. ಹಾಗಾಗಿ ಪ್ರತಿ ಕುಟುಂಬವೂ 10 ದಿನ ಚಳವಳಿಗೆ ಹಾಗೂ 20 ದಿನ ಕೃಷಿಗೆ ಮೀಸಲಿಟ್ಟರೆ ಭೂಮಿಯನ್ನು ಸಂರಕ್ಷಿಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
'ದೇಶದಾದ್ಯಂತ ಪಾಪ್‌ಕಾರ್ನ್‌ಗೆ ಬಳಸುವ ಮೆಕ್ಕೆಜೋಳವನ್ನು ಬಿಹಾರ ಉತ್ಪಾದಿಸುತ್ತದೆ. ಆದರೆ, ಇಲ್ಲಿನ ರೈತರಿಗೆ ಒಂದು ಕೆ.ಜಿ ಮೆಕ್ಕೆಜೋಳಕ್ಕೆ ಕೇವಲ ₹12ರಿಂದ ₹14 ಸಿಗುತ್ತದೆ. ಅದಕ್ಕಾಗಿಯೇ ಅನೇಕ ರೈತರು ಬಿಹಾರವನ್ನು ತೊರೆದು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಬಿಹಾರದಲ್ಲಿ ಕೃಷಿ ಮಾರುಕಟ್ಟೆಗಳನ್ನು (ಮಂಡಿಗಳು) ಮುಚ್ಚಿರುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಗಳಿಂದ ರಾಷ್ಟ್ರವ್ಯಾಪಿ ಮಂಡಿಗಳನ್ನು ಕ್ರಮೇಣ ಮುಚ್ಚಲು ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿರುವ ಅಧಿಕಾರಿಗಳ ವಿರುದ್ಧ 72 ಗಂಟೆಗಳ ಕಾಲ ಧರಣಿ ಮಾಡುವಂತೆ ಟಿಕಾಯತ್ ಕರೆ ನೀಡಿದ್ದಾರೆ.




