HEALTH TIPS

ಯಾವುದೇ ಹೇಳಿಕೆ, ಸುದ್ದಿ ಪ್ರಕಟಿಸುವಾಗ ಮಾಧ್ಯಮಗಳು ಅತ್ಯಂತ ಎಚ್ಚರ ವಹಿಸಬೇಕು: SC

ನವದೆಹಲಿ: ಮಾಧ್ಯಮಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಯಾವುದೇ ಹೇಳಿಕೆಗಳು, ಸುದ್ದಿಗಳು ಅಥವಾ ಅಭಿಪ್ರಾಯಗಳನ್ನು ಪ್ರಕಟಿಸುವ ಮೊದಲು ಅತ್ಯಂತ ಎಚ್ಚರಿಕೆ ಮತ್ತು ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಮಾಧ್ಯಮದ ಶಕ್ತಿ ಮಹತ್ವದ್ದಾಗಿದೆ.

ಸಾರ್ವಜನಿಕ ಭಾವನೆಗಳನ್ನು ಪ್ರಭಾವಿಸುವ ಮತ್ತು ಗಮನಾರ್ಹ ವೇಗದಲ್ಲಿ ಗ್ರಹಿಕೆಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಪತ್ರಿಕೆ ಹೊಂದಿದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರ ಪೀಠವು ಪುನರುಚ್ಚರಿಸಿತು.

ಬಿಡ್ ಮತ್ತು ಹ್ಯಾಮರ್ ಹರಾಜಿಗಿಡಲಿರುವ ಕೆಲವು ವರ್ಣಚಿತ್ರಗಳ ದೃಢೀಕರಣದ ಮೇಲೆ ಮಾನನಷ್ಟ ಸಂಬಂಧಿತ ಸುದ್ದಿಯನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಿ ಆಂಗ್ಲ ದೈನಿಕ ಟೈಮ್ಸ್ ಆಫ್ ಇಂಡಿಯಾದ ಸಂಪಾದಕೀಯ ನಿರ್ದೇಶಕರು ಮತ್ತು ಇತರ ಪತ್ರಕರ್ತರ ವಿರುದ್ಧ ದಾಖಲಿಸಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಪೀಠ ಈ ಮಾತುಗಳನ್ನು ಹೇಳಿದೆ.

'ಭಾರತದ ಸಂವಿಧಾನದ 19 (1) (ಎ) ಅಡಿಯಲ್ಲಿ ಖಾತರಿಪಡಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅತ್ಯುನ್ನತವಾಗಿದೆ ಎಂದು ನಾವು ಒತ್ತಿಹೇಳುವುದು ಅಗತ್ಯವಾಗಿದೆ. ಅದೇ ಸಮಯದಲ್ಲಿ, ಮಾಧ್ಯಮದಲ್ಲಿ ಕೆಲಸ ಮಾಡುವವರು, ವಿಶೇಷವಾಗಿ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿಗಳು, ಲೇಖಕರು ಮುಂತಾದವರು ಯಾವುದೇ ಹೇಳಿಕೆಗಳನ್ನು ಪ್ರಕಟಿಸುವ ಮೊದಲು ಅತ್ಯಂತ ಎಚ್ಚರಿಕೆ ಮತ್ತು ಜವಾಬ್ದಾರಿಯನ್ನು ವಹಿಸಬೇಕು' ಎಂದು ಪೀಠ ಹೇಳಿದೆ.

'ಕತ್ತಿಗಿಂತ ಲೇಖನಿ ಹರಿತವಾದುದು' ಎಂಬ ಆಂಗ್ಲ ಲೇಖಕ ಬುಲ್ವರ್ ಲಿಟ್ಟನ್ ಮಾತುಗಳನ್ನು ನ್ಯಾಯಾಲಯವು ಈ ಸಂದರ್ಭ ಉಲ್ಲೇಖಿಸಿದೆ.

ಒಂದು ಲೇಖನ ಅಥವಾ ವರದಿಯು ಲಕ್ಷಾಂತರ ಜನರೊಂದಿಗೆ ಅನುರಣಿಸುತ್ತದೆ. ಅವರ ನಂಬಿಕೆ ಬದಲಿಸುತ್ತದೆ ಮತ್ತು ಅಭಿಪ್ರಾಯಗಳನ್ನು ರೂಪಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

'ಮಾಧ್ಯಮ ವರದಿಯಲ್ಲಿ ನಿಖರತೆ ಮತ್ತು ನ್ಯಾಯಸಮ್ಮತತೆಯ ನಿರ್ಣಾಯಕ ಅಗತ್ಯವನ್ನು ಈ ವಾಕ್ಯ ಎತ್ತಿ ತೋರಿಸುತ್ತದೆ. ವಿಶೇಷವಾಗಿ, ವ್ಯಕ್ತಿಗಳು ಅಥವಾ ಸಂಸ್ಥೆಗಳ ಸಮಗ್ರತೆಯ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿರುವ ಸುದ್ದಿ ಅಥವಾ ಲೇಖನಗಳನ್ನು ಪ್ರಕಟಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸುದ್ದಿ ಪ್ರಕಟಿಸಬೇಕು' ಎಂದು ಪೀಠ ಹೇಳಿದೆ.

ನಾನನಷ್ಟ ಮೊಕಸದ್ದಮೆಯಲ್ಲಿ ತಮ್ಮ ಅರ್ಜಿ ತಿರಸ್ಕರಿಸಿ ಕ್ರಿಮಿನಲ್ ವಿಚಾರಣೆಗೆ ಆದೇಶಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಪತ್ರಕರ್ತರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಐಪಿಸಿ ಸೆಕ್ಷನ್ 499(ಮಾನನಷ್ಟ) ಮತ್ತು ಸೆಕ್ಷನ್ 500(ಮಾನಹಾನಿಗೆ ಶಿಕ್ಷೆ ) ಅಡಿಯಲ್ಲಿ ಪತ್ರಕರ್ತ ವಿರುದ್ಧ ಪ್ರಕರಣ ದಾಖಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries