ನವದೆಹಲಿ: ಮಾರ್ಚ್ 15ಕ್ಕೆ ನಿಗದಿ ಆಗಿರುವ ಹಿಂದಿ ಪರೀಕ್ಷೆಗೆ ಹಾಜರಾಗಲು ಹೋಳಿ ಹಬ್ಬದ ಕಾರಣಕ್ಕಾಗಿ ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಇನ್ನೊಂದು ಅವಕಾಶ ಸಿಗಲಿದೆ ಎಂದು ಸಿಬಿಎಸ್‌ಇ ಗುರುವಾರ ಹೇಳಿದೆ.
'ದೇಶದ ಕೆಲವು ಕಡೆಗಳಲ್ಲಿ ಹೋಳಿ ಹಬ್ಬವನ್ನು ಮಾರ್ಚ್ 15ರಂದು ಆಚರಿಸಲಾಗುತ್ತದೆ ಎಂದು ನಮಗೆ ಮಾಹಿತಿ ನೀಡಲಾಗಿದೆ' ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ಹೇಳಿದ್ದಾರೆ.
ಮಾರ್ಚ್ 15ರ ಪರೀಕ್ಷೆಯು ನಿಗದಿಯಂತೆ ನಡೆಯಲಿದೆ. ಆದರೆ ಅಂದು ಪರೀಕ್ಷೆಗೆ ಹಾಜರಾಗಲು ಆಗದ ವಿದ್ಯಾರ್ಥಿಗಳಿಗೆ ಇನ್ನೊಂದು ದಿನ ಪರೀಕ್ಷೆ ನಡೆಯಲಿದೆ. ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪರೀಕ್ಷೆ ನಡೆಸುವಾಗ ಇವರಿಗೂ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತದೆ ಎಂದು ತಿಳಿಸಿದ್ದಾರೆ.

