HEALTH TIPS

ಕೊಂಡೆವೂರಲ್ಲಿ ನೂತನ ಅತಿಥಿ ಗೃಹ ವಿಶ್ವಂ ಲೋಕಾರ್ಪಣೆ : ಆಶ್ರಮ ಬೆಳವಣಿಗೆಯ ಹಿಂದೆ ಎಲ್ಲರ ಬೆಳವಣಿಗೆಯೊಂದೇ ಲಕ್ಷ್ಯ-ಕೊಂಡೆವೂರು ಶ್ರೀ ಅಭಿಮತ

ಉಪ್ಪಳ: ಕಷ್ಟಗಳಿಗೆ ಸ್ಪಂದಿಸುವ ಹೃದಯ ಗುರುತಿಸಲ್ಪಡುತ್ತದೆ. ಎಲ್ಲರೂ ಒಂದಾದರೆ ಮಾತ್ರ ಧರ್ಮಕೇಂದ್ರ ಬೆಳೆಯಲು ಸಾಧ್ಯ. ಉಳ್ಳವರು ಇಲ್ಲದವರಿಗೆ ನೀಡಿದಾಗ ಸಮಾಜ ಸಮತೋಲನದ ಸ್ವಾಥ್ಯದಿಂದಿರಲು ಸಾಧ್ಯ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೊಂಡೆವೂರು ಶ್ರೀಮಠದಲ್ಲಿ ನೂತನವಾಗಿ ನಿರ್ಮಿಸಿದ "ವಿಶ್ವಂ" ಅತಿಥಿಗೃಹವನ್ನು ಭಾನುವಾರ ಬೆಳಿಗ್ಗೆ ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.


ಭಾರತದ ಪ್ರಾಚೀನ ಪರಂಪರೆಯ ಪರಿಕಲ್ಪನೆಯೆಂಬುದು ವಿಶ್ವ ಸಮೃದ್ಧತೆಯಾಗಿದ್ದು, ಸಕಲ ಜೀವರಾಶಿಗಳ ಸೌಖ್ಯ ನಮ್ಮ ಶ್ರೀರಕ್ಷೆಯಾಗಿದೆ. ಆಶ್ರಮವನ್ನು ಬೆಳೆಸುವುದರ ಹಿಂದೆ ಎಲ್ಲರ ಬೆಳವಣಿಗೆಯೊಂದೇ ಲಕ್ಷ್ಯವಿರುವುದು. ದಾನಿಗಳನ್ನು ಜೋಡಿಸಿ ನೂರಾರು ಜನರಿಗೆ ವಿವಿಧ ಕ್ಷೇತ್ರದಲ್ಲಿ ಆಸರೆಯಾಗಲು ಸಾಧ್ಯವಾಗುತ್ತಿರುವುದು ಭಗವದನುಗ್ರಹದಿಂದ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ ಕೇಂದ್ರ ವಿದ್ಯುತ್ ಮತ್ತು ಹೊಸ-ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯಕ್ ಮಾತನಾಡಿ, ಜೀವನದ ಆತ್ಯಂತಿಕ ಲಕ್ಷ್ಯ ನೆಮ್ಮದಿಯಿಂದ ಸಾಯುಜ್ಯ ಪ್ರಾಪ್ತಿಯಾಗಿದ್ದು, ಬದುಕಿನ ಜಂಜಡಗಳ ಮಧ್ಯೆ ಆಧ್ಯಾತ್ಮಿಕ ಅನುಭೂತಿ ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಕೊಂಡೆವೂರು ಶ್ರೀಮಠ ರಾಷ್ಟ್ರದಲ್ಲೇ ಗುರುತಿಸಲ್ಪಟ್ಟ ಆಧ್ಯಾತ್ಮಿಕ, ಧಾರ್ಮಿಕದ ಜೊತೆಗೆ ಆಶ್ರಿತರಿಗೆ ಆಸರೆಯಾಗಿ ಬೆಂಬಲ ನೀಡುವ ಕೇಂದ್ರವಾಗಿದೆ ಎಂದರು. 




ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಕೇಂದ್ರ ಸಚಿವ, ಒರಿಸ್ಸಾದ ಬಾಲಸೋರ್ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಉಪಸ್ಥಿತರಿದ್ದು ಶ್ರೀಮಠದ ನೂತನ ವೆಬ್ ಸೈಟ್ ನ್ನು ಉದ್ಘಾಟಿಸಿ ಮಾತನಾಡಿ, ಜೀವಕೋಟಿಗಳಲ್ಲಿ ಶ್ರೇಷ್ಠವಾದ ಮಾನವ ಜನ್ಮದ ಮಹತ್ವಿಕೆಯು ಧರ್ಮದ ಆಧಾರದ ಮೇಲಿನ ಜೀವನ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಇತರ ಜೀವಿಗಳೊಂದಿಗೆ ಬದುಕುವ ಮಾನವ ತನ್ನಂತೆಯೇ ಇತರರೆಂದು ಪರಿಭಾವಿಸಿ ಪ್ರಕೃತಿಯೊಂದಿಗೆ ಒಂದಾಗಿ ಬದುಕುವುದನ್ನು ಮರೆಯಬಾರದು. ಸಾಂಪ್ರದಾಯಿಕ, ಸರಳ ಜೀವನದ ಮೂಲಕ ಮುಮುಕ್ಷುಗಳಾಗಿ ಬದುಕನ್ನು ಸಾರ್ಥಕಗೊಳಿಸಬೇಕು. ಈ ನಿಟ್ಟಿನಲ್ಲಿ ಕೊಂಡೆವೂರು ಶ್ರೀಗಳಂತಹ ಸಂತಶ್ರೇಷ್ಠರ ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.

ರಾಜ್ಯ ಸಭಾ ಸದಸ್ಯ ಕೆ.ನಾರಾಯಣ. ಬೆಂಗಳೂರು, ಸಿಎಂಆರ್ ವಿಶ್ವವಿದ್ಯಾಲಯ ಹಾಗೂ ಸಿಎಂಆರ್ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಮಾಜಿ ರಾಜ್ಯಸಭಾ ಸದಸ್ಯ ಡಾ. ಕೆ.ಸಿ ರಾಮಮೂರ್ತಿ ಬೆಂಗಳೂರು, ಯತಿ ವಿನಯಸಾಗರ್ ಉಜ್ಜೈನಿ, ಉದ್ಯಮಿ ರಘುರಾಮ ಶೆಟ್ಟಿ ಮುಂಬೈ, ಶ್ರೀ ಉಮಾಮಹೇಶ್ವರೀ ದೇವಸ್ಥಾನ ಕಾಪಿಕಾಡ್ ನ ಆಡಳಿತ ಮೊಕ್ತೇಸರ ಎ.ಜೆ ಶೇಖರ್ ಉಪಸ್ಥಿತರಿದ್ದು ಮಾತನಾಡಿದರು.

ಈ ಸಂದರ್ಭದಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳುಗಳಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ(ಹೇರಂಭಾ ಇಂಡಸ್ಟ್ರೀಸ್ ಮುಂಬಯಿ), ಕೆ.ಕೆ. ಶೆಟ್ಟಿ, (ಆಡಳಿತ ಮೊಕ್ತೇಸರರು, ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಮುಂಡಪಳ್ಳ) ಮತ್ತು ವಿಶ್ವನಾಥ್ ವೇಂಗರ(ಉದ್ಯಮಿ ಮಸ್ಕತ್) ಇವರುಗಳನ್ನು ಗಣ್ಯರ ಸಮಕ್ಷಮ ಸನ್ಮಾನಿಸಲಾಯಿತು. 

ಆಶ್ರಮದ ಟ್ರಸ್ಟಿ, ಕರ್ನಾಟಕ ವಿಧಾನ ಪರಿಷತ್ತು ಮಾಜಿ ಸದಸ್ಯ ಮೋನಪ್ಪ ಭಂಡಾರಿ ಸ್ವಾಗತಿಸಿದರು. ವಿಧಾನ ಪರಿಷತ್ತು ಮಾಜಿ ಸದಸ್ಯ ಕ್ಯಾಪ್ಟನ್.ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ.ಸಾ.ಪ ಜಿಲ್ಲಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ವಂದಿಸಿದರು. ಅರವಿಂದಾಕ್ಷ ಭಂಡಾರಿ, ವಕೀಲ ಗಂಗಾಧರ ಕೊಂಡೆವೂರು, ಅಶೋಕ ಬಾಡೂರು ಹಾಗೂ ಪ್ರಶೌನ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.


ಅಪರಾಹ್ಣ 2. ರಿಂದ ಸವಿಜೀವನಂ ನೃತ್ಯಕಲಾ ಕ್ಷೇತ್ರ ಕೊಂಡೆವೂರು, ಇದರ ವಿದುಷಿ ಸವಿತಾಜೀವನ್ ಮತ್ತು ಶಿಷ್ಯ ವೃಂದದವರಿಂದ ನೃತ್ಯ ವೈಭವ-2025 ನಡೆಯಿತು. ಸಂಜೆ 6. ಕ್ಕೆ ನಕ್ಷತ್ರನವದಲ್ಲಿ ನವಗ್ರಹ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ಬೆಳಿಗ್ಗೆ 7.30 ಕ್ಕೆ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ ಶ್ರೀಲಕ್ಷ್ಮೀನಾರಾಯಣ ಹೃದಯ ಹೋಮ ಆರಂಭಗೊಂಡು ಪೂರ್ವಾಹ್ನ 10.30 ಕ್ಕೆ ಪೂರ್ಣಾಹುತಿಯ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಮಾರಂಭದಲ್ಲಿ ನಾಡಿನ ಉದ್ದಗಲದ ಗಣ್ಯರು, ಶ್ರೀಮಠದ ಶಿಷ್ಯರು, ಮಾತೆಯರು ಪಾಲ್ಗೊಂಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries