ನವದೆಹಲಿ: ಅಮೆರಿಕ ಮೂಲದ ಪಾಡ್‌ಕಾಸ್ಟರ್ ಜೊತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಟೀಕಿಸಿದ್ದು, 'ಈ ಬೂಟಾಟಿಕೆಗೆ ಎಣೆಯಿಲ್ಲ' ಎಂದು ಹೇಳಿದೆ.
ಅವರು ಒಂದು ಮಾಧ್ಯಮ ಗೋಷ್ಠಿಯನ್ನೂ ಮಾಡಿಲ್ಲ. ಇದೀಗ ಅಮೆರಿಕ ಪಾಡ್‌ಕಾಸ್ಟರ್ ಜೊತೆ ಕುಳಿತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಅಮೆರಿಕ ಖ್ಯಾತ ಪಾಡ್‌ಕಾಸ್ಟರ್ ಹಾಗೂ ಕಂಪ್ಯೂಟರ್ ವಿಜ್ಞಾನಿ ಲೆಕ್ಸ್ ಫ್ರಿಡ್‌ಮನ್ ಜೊತೆ ಮೂರು ಗಂಟೆಗೂ ಹೆಚ್ಚು ಮಾತನಾಡಿದ್ದ ಮೋದಿ, ತಮ್ಮ ಜೀವನ ಪ್ರಯಾಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದರು.
ತಮ್ಮೊಳಗೆ ದೇಶ ಭಕ್ತಿಯನ್ನು ಉದ್ದೀಪಿಸಿದ ಆರ್‌ಎಎಸ್‌ಎಸ್, ಮಹಾತ್ಮ ಗಾಂಧಿಯವರ ತತ್ವಾದರ್ಶಗಳು, ಭಾರತ-ಅಮೆರಿಕ ಸಂಬಂಧ, ಗೋಧ್ರಾ ಗಲಭೆ ಮುಂತಾದ ವಿಷಯಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು.
'ವಿಮರ್ಶೆ ಮಾಡುವುದು ಪ್ರಜಾಪ್ರಭುತ್ವದ ಜೀವಾಳ. ಸ್ವಾಯತ್ತ ಸಂಸ್ಥೆಗಳನ್ನು ನಾಶ ಮಾಡಿದ್ದಾರೆ. ಟೀಕಾಕಾರರ ವಿರುದ್ಧ ಪ್ರತೀಕಾರ ತೀರಿಸುತ್ತಿದ್ದಾರೆ' ಎಂದು ಕಾಂಗ್ರೆಸ್‌ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಮಾಧ್ಯಮವನ್ನು ಎದುರಿಸಲು ಭಯಪಡುವ ಅವರು, ಬಲಪಂಥೀಯ ವಿದೇಶಿ ಪಾಡ್‌ಕಾಸ್ಟರ್ ಜೊತೆ ಹಾಯಾಗಿ ಮಾತನಾಡಿದ್ದಾರೆ. ತಮ್ಮನ್ನು ಟೀಕೆ ಮಾಡಿದವರ ವಿರುದ್ಧ ಸರಿಸಾಟಿ ಇಲ್ಲದ ದಾಳಿ ನಡೆಸುತ್ತಾರೆ. ಈ ಬೂಟಾಟಿಕೆಗೆ ಎಣೆಯಿಲ್ಲ' ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.




