ಕೊಚ್ಚಿ: ಅನ್ಯ ರಾಜ್ಯ ಕಾರ್ಮಿಕರ ಸೋಗಲ್ಲಿ ಬರುವ ಬಾಂಗ್ಲಾ ಮೂಲದವರಿಗೆ ಹಾಗೂ ಇತರ ರಾಜ್ಯ ಕಾರ್ಮಿಕರಿಗೆ ನಕಲಿ ಆಧಾರ್ ಕಾರ್ಡು ಒದಗಿಸುತ್ತಿದ್ದ ವ್ಯಕ್ತಿಯನ್ನು ಕೊಚ್ಚಿ ಪೆರುಂಬವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಚ್ಚಿ ಪೆರುಂಬಾವೂರ್‍ನಲ್ಲಿ ಮೊಬೈಲ್ ಶಾಪ್ ಕೇಂದ್ರೀಕರಿಸಿ ನಕಲಿ ಆಧಾರ್ ಕಾರ್ಡು ನಿರ್ಮಿಸಿ ಕೊಡುತ್ತಿದ್ದ ಬಾಂಗ್ಲಾ ದೇಶದ ನಿವಾಸಿ ಹರ್ಜೂಲ್ ಇಸ್ಲಾಂ ಎಂಬಾತ ಬಂಧಿತ.
ಪೆರುಂಬಾವೂರಿನಲ್ಲಿ ನೆಲೆಸಿರುವ ಉತ್ತರ ಭಾರತೀಯ ಕಾರ್ಮಿಕರ ಮಧ್ಯೆ ಮಾರಕ ಮಾದಕ ವಸ್ತು ಮಾರಾಟ, ಉಪಯೋಗ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ನಡೆಸಿದ ಕಾರ್ಯಾಚರಣೆಯ ವೇಳೆ ನಕಲಿ ಆಧಾರ್ ಕಾರ್ಡು ನಿರ್ಮಿಸಿ ವಿತರಿಸುವ ದಂಧೆ ಬೆಳಕಿಗೆ ಬಂದಿದೆ. ಈತ ಪೆರುಂಬಾವೂರಿನ ಖಾಸಗಿ ಬಸ್ ನಿಲ್ದಾಣದ ಬಳಿ ಅಸ್ಲಾಂ ಮೊಬೈಲ್ಸ್ ಎಂಬ ಅಂಗಡಿ ಹೊಂದಿದ್ದು, ಇಲ್ಲಿಂದ ನಕಲಿ ಆಧಾರ್ ಕಾರ್ಡು ನಿರ್ಮಾಣಕ್ಕೆ ಬಳಸಿದ ಲ್ಯಾಪ್ ಟೋಪ್, 55ಸಾವಿರ ರೂ ನಗದು ವಶಪಡಿಸಿಕೊಮಡಿದ್ದಾರೆ.
ಮೊಬೈಲ್ ಶಾಪಿಗೆ ಮೊಬೈಲ್ ಸಿಮ್ ಖರೀದಿಗೆ ಬರುವ ಗ್ರಾಹಕರು ನೀಡುತಿದ್ದ ಅಸಲಿ ಆಧಾರ್ ಕಾರ್ಡನ್ನು ಬಳಸಿ ಚಿತ್ರ, ವಿಳಾಸ ಬದಲಿಸಿ ನಕಲಿ ಆಧಾರ್ ನಿರ್ಮಿಸಿ ನೀಡುತ್ತಿರುವುದನ್ನು ಕಾರ್ಯಾಚರಣೆ ವೇಳೆ ಪತ್ತೆಹಚ್ಚಲಾಗಿದೆ. ಇತ್ತೀಚೆಗೆ ಪೆರುಂಬಾವೂರಿನಲ್ಲಿ ನಕಲಿ ಆಧಾರ್ ಕಾರ್ಡು ಉಪಯೋಗಿಸಿ ವಾಸಿಸಿದ್ದ 27ಮಂದಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿತ್ತು.




