HEALTH TIPS

ಇತಿಹಾಸ ಪ್ರಸಿದ್ಧ ಮಧೂರು ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶ, ಮೂಡಪ್ಪ ಸೇವೆಗೆ ಚಾಲನೆ-ಹರಿದು ಬರುತ್ತಿರುವ ಭಕ್ತಜನ ಪ್ರವಾಹ

ಮಧೂರು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿ ನೇತೃತ್ವದಲ್ಲಿ ಗುರುವಾರ ವಿದ್ಯುಕ್ತ ಚಾಲನೆ ನೀಡಲಾಯಿತು. 

ಬೆಳಗ್ಗೆ ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿ ಹಾಗೂ ಋತ್ವಿಜರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭ ವಾಸ್ತು ಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ ಅವರಿಗೆ ಶಿಲ್ಪಿ ಮರ್ಯಾದೆ ನೀಡಲಾಯಿತು. ನಂತರ ಪ್ರಾಸಾದ ಪರಿಗ್ರಹ, ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಶ್ರೀ ದೇವರ ಉಗ್ರಾಣ ಮುಹೂರ್ತ, ಅನ್ನ ಸಂತರ್ಪಣೆಯ ಉಗ್ರಾಣ ಮುಹೂರ್ತ, ಆಚಾರ್ಯಾದಿ ಋತ್ವಿಗ್ವರಣೆ, ಬ್ರಹ್ಮಕೂರ್ಚ ಹೋಮ, ಕಂಕಣ ಬಂಧನ, ಅಥರ್ವಶೀರ್ಷ ಮಹಾಗಣಪತಿ ಯಾಗ ನೆರವೇರಿತು. 


ಶ್ರೀದೇವರ ನಡೆಯಲ್ಲಿ ನಡೆದ ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆಯಲ್ಲಿ ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ. ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ದೇವಸ್ಥಾನದ ಪವಿತ್ರಪಾಣಿ ರತನ್‍ಕುಮಾರ್ ಕಾಮಡ, ಜಯದೇವ ಖಂಡಿಗೆ ಮೊದಲಾದವರು ಉಪಸ್ಥಿತರಿದ್ದರು.

1992ರಲ್ಲಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ ನಡೆದು ಬಂದಿದ್ದು, 33ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮೂಡಪ್ಪ ಸೇವೆಗೆ ದೇಗುಲ ಸಿದ್ಧಗೊಂಡಿದ್ದು, ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಸೇರುತ್ತಿದ್ದಾರೆ. ನಾಲ್ಕು ವೇದಿಕೆಗಳಲ್ಲಿ ಭಜನೆ, ಯಕ್ಷಗಾನ ಸೇರಿದಂತೆ ನಿರಂತರ ಕಾರ್ಯಕ್ರಮ ನಡೆಯುತ್ತಿದೆ. 

ಇಂದು ಸಂಜೀವಿನೀ ಮಹಾ ಮೃತ್ಯುಂಜಯ ಹೋಮ:

ಮಾ 28ರಂದು ಬೆಳಗ್ಗೆ 8ಕ್ಕೆ ಸಂಜೀವಿನೀ ಮಹಾ ಮೃತ್ಯುಂಜಯ ಹೋಮ ನಡೆಯುವುದು. ಅರಣಿಯಲ್ಲಿ ಅಗ್ನಿ ಮಥನ ಮಾಡುವ ಮೂಲಕ ಯಾಗಕ್ಕೆ ಚಾಲನೆ ನೀಡಲಾಗುವುದು. ಧಾರಾಂತ ಬಿಂಬ ಶುದ್ಧಿ ಪ್ರಕ್ರಿಯೆ, ಸಾಮಾನ್ಯ ಪ್ರಾಯಶ್ಚಿತ್ತ ಹೋಮ, ಸಂಜೆ 5ಕ್ಕೆ ಶ್ರೀದುರ್ಗಾ ನಮಸ್ಕಾರ ಪೂಜೆ ನಡೆಯುವುದು.

30ರಂದು ಬೆಳಗ್ಗೆ 9ಕ್ಕೆ ಶ್ರೀ ಮದನಂತೇಶ್ವರ ದೇವರ ಪ್ರಾಸಾದಕ್ಕೆ ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಅಷ್ಟಬಂಧ ಪ್ರತಿಷ್ಠೆ ನಡೆಯುವುದು. ಏ. 2ರಂದು ಬೆಳಗ್ಗೆ 7ಕ್ಕೆ ಬ್ರಹ್ಮಕಲಶಾಭಿಷೇಕ ಆರಂಭಗೊಳ್ಳುವುದು. ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ ನಡೆಯುವುದು. ಏ. 5ರಂದು 128ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಮೂಡಪ್ಪ ಸೇವೆಯ ಅರಿಕೊಟ್ಟಿಗೆ  ಮುಹೂರ್ತ, ಮಧ್ಯಾಹ್ನ ಅಪ್ಪ ತಯಾರಿ ಆರಂಭ, ರಾತ್ರಿ 10ಕ್ಕೆ ಮಹಾಮೂಡಪ್ಪಾಧಿವಾಸ ಹೋಮ, 11ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಮಹಾಮೂಡಪ್ಪ ಸಮರ್ಪಣೆ, 6ರಂದು ಬೆಳಗ್ಗೆ 6.20ಕ್ಕೆ ಕವಾಟೊದ್ಘಾಟನೆ, ಬೊಡ್ಡಜ್ಜ ಮಧೂರು ಶ್ರೀ ಸಿದ್ಧಿವಿನಾಯಕ ದೇವರ ದಿವ್ಯ ದರ್ಶನ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯುವುದು. 7ರಂದು ಸಮಾರೋಪ ಸಮಾರಂಭ ನಡೆಯುವುದು.



ಚಿತ್ರ-1) ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. 

ಚಿತ್ರ-2) ದೇವಸ್ಥಾನದಲ್ಲಿ ಅಥರ್ವಶೀರ್ಷ ಮಹಾಗಣಪತಿ ಯಾಗ ನೆರವೇರಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries