HEALTH TIPS

ಕವಿತೆ, ಹಾಸ್ಯ ದ್ವೇಷಕ್ಕೆ ಕಾರಣವಾಗದು: ಸುಪ್ರೀಂ ಕೋರ್ಟ್

ನವದೆಹಲಿ: ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, 'ಕೇವಲ ಕವಿತೆ ವಾಚನ, ಹಾಸ್ಯ, ಯಾವುದೇ ರೀತಿಯ ಕಲೆ ಅಥವಾ ಮನರಂಜನೆಯು ಸಮುದಾಯಗಳ ನಡುವೆ ದ್ವೇಷ ಬಿತ್ತಲು ಕಾರಣವಾಗುತ್ತದೆ ಎನ್ನಲಾಗದು' ಎಂದು ಶುಕ್ರವಾರ ಹೇಳಿದೆ.

ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪಗಢಿ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ವಲ್‌ ಭುಯಾಂ ಅವರ ಪೀಠವು, 'ಕಾವ್ಯ, ನಾಟಕ, ಚಲನಚಿತ್ರ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿ, ವಿಡಂಬನ ಸಾಹಿತ್ಯ ಹಾಗೂ ಕಲೆ ಸೇರಿದಂತೆ ವೇದಿಕೆ ಕಾರ್ಯಕ್ರಮಗಳು ಮಾನವನ ಜೀವನವನ್ನು ಹೆಚ್ಚು ಅರ್ಥಪೂರ್ಣವನ್ನಾಗಿಸಿದೆ' ಎಂದು ಹೇಳಿತು.

'ಯೆ ಖೂನ್ ಸೆ ಪ್ಯಾಸೆ ಬಾತ್ ಸುನೋ...' ಎಂಬ ಕವಿತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಗುಜರಾತ್‌ನ ಜಾಮ್‌ನಗರದಲ್ಲಿ ಇಮ್ರಾನ್‌ ವಿರುದ್ಧ ಜನವರಿ 3ರಂದು ಪ್ರಕರಣ ದಾಖಲಾಗಿತ್ತು.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಗುಜರಾತ್ ಹೈಕೋರ್ಟ್‌ನ ಜ.17ರ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವು, 'ಈ ಕವಿತೆಗೆ ಯಾವುದೇ ಧರ್ಮ, ಜಾತಿ, ಸಮುದಾಯ ಅಥವಾ ನಿರ್ದಿಷ್ಟ ಗುಂಪಿನ ಜತೆ ಸಂಬಂಧವಿಲ್ಲ' ಎಂದು ಹೇಳಿತು.

'ಕವಿತೆಯ ಸಾಲುಗಳು ದ್ವೇಷದ ಭಾವನೆ ಉಂಟುಮಾಡದು ಅಥವಾ ಉತ್ತೇಜಿಸದು. ಇದು ಆಡಳಿತಗಾರ ಮಾಡಿದ ಅನ್ಯಾಯವನ್ನು ಪ್ರಶ್ನಿಸುವಂತೆ ಕೋರುತ್ತದೆ. ಮೇಲ್ಮನವಿದಾರರು ಬಳಸಿರುವ ಪದಗಳು ಸಾರ್ವಜನಿಕ ಶಾಂತಿಯನ್ನು ಭಂಗಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲು ಆಗದು' ಎಂದು ಪೀಠ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries