ಕಾಸರಗೋಡು: ವೇತನ ಹೆಚ್ಚಳ ಸೇರಿದಂತೆ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಮುಷ್ಕರ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಅಣಕಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಇದೇ ಕಾರ್ಯಕರ್ತೆಯರು ಅಧಿಕಾರದಿಂದ ಕಿತ್ತೊಗೆಯುವ ಕಾಲ ದೂರವಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸಿ.ಕೆ.ಪದ್ಮನಾಭನ್ ಹೇಳಿದ್ದಾರೆ.
ಅವರು ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಸೂಚಿಸಿ ಕಾಸರಗೋಡು ನಗರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಶಾ ಕಾರ್ಯಕರ್ತೆಯರ ನ್ಯಾಐಉತ ಹೋರಾಟಕ್ಕೆ ಬಿಡಿಗಾಸಿನ ಬೆಲೆ ನೀಡದೆ, ಸರ್ಕಾರ, ಅವರ ಹೋರಾಟವನ್ನು ಹತ್ತಿಕ್ಕುವ ಕೆಲಸ ನಡೆಸುತ್ತಿದೆ. ತಮ್ಮ ಬೇಡಿಕೆ ಈಡೇರಿಕೆಗಾಗಿ ಹಲವು ದಿವಸಗಳಿಂದ ಅವರು ಬೀದಿಗಿಳಿದು ನಡೆಸುತ್ತಿರುವ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕಾದ ಸರ್ಕಾರ ಅವರನ್ನು ಅವಹೇಳನ ನಡೆಸುತ್ತಿರುವುದು ಖಂಡನೀಯ. ಆಶಾ ಕರ್ಯಕರ್ತೆಯರ ಹೋರಾಟ ಬೆಂಬಲಿಸಿ ಕೇರಳದಾದ್ಯಂತ ಪ್ರತಿಭಟನೆ ನಡೆಸಲು ಪಕ್ಷ ಮುಂದಾಗಲಿರುವುದಾಗಿ ತಿಳಿಸಿದರು.
ಆಶಾ ಕಾರ್ಯಕರ್ತೆಯರ ಮುಷ್ಕರವನ್ನು ಬಾಡಿಗೆ ವಸೂಲಿಗಾರರ ಮುಷ್ಕರ ಎಂದು ಸಿಐಟಿಯು ಮುಖಂಡನೊಬ್ಬ ಲೇವಡಿ ಮಾಡುವ ಮೂಲಕ ಮಹಿಳೆಯರ ಸಮುದಾಯವನ್ನು ಅಪಮಾನಿಸಲಾಗಿದೆ. ಸರ್ಕಾರದ ವಿಶೇಷ ಪ್ರತಿನಿಧಿಯೊಬ್ಬ ಲಕ್ಷಾಂತರ ರೂ. ಗೌರವಧನ ಪಡೆಯುತ್ತಿದ್ದರೆ, ಪರಿಶ್ರಮಿಗಳಾದ ಆಶಾ ಕಾರ್ಯಕರ್ತೆಯರು ಕನಿಷ್ಠ ವೇತನಕ್ಕೆ ಕೆಲಸಮಾಡಬೇಕಾದ ಅನಿವಾರ್ಯತೆಯಿದೆ. ಆಶಾ ಕಾರ್ಯಕರ್ತೆಯರ ಹೋರಾಟವನ್ನು ಅವಹೇಳನ ನಡೆಸುವುದನ್ನು ಸರ್ಕಾರ ಹಾಗೂ ಸಿಪಿಎಂ ಮುಖಂಡರು ಕೊನೆಗಾಣಿಸಬೇಕು ಎಂದು ಸಿ.ಕೆ ಪದ್ಮನಾಭನ್ ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಶಾ ಕರ್ಯಕರ್ತೆಯರ ಹೋರಾಟ ಸಕಾರಕ್ಕೆ ಎಚ್ಚರಿಕೆ ಕರೆಯಾಗಲಿದೆ. ಕೋ-ಬ್ರಾಂಡಿಂಗ್ ಜಾರಿಯಾದರೆ ಪಿಣರಾಯಿ ವಿಜಯನ್ ಸರ್ಕಾರ ತಮ್ಮದೆಂದು ಹೇಳಿಕೊಳ್ಳುತ್ತಿರುವ ಹಲವು ಯೋಜನೆಗಳು ಕೇಂದ್ರ ಸರ್ಕಾರದ ನೆರವಿನಿಂದ ಜಾರಿಯಾಗುತ್ತಿದೆ ಎಂಬುದು ಜನತೆಗೆ ಸ್ಪಷ್ಟವಾಗಲಿದೆ. ಇದೇ ಭಯ ಪಿಣರಾಯಿ ಸರ್ಕಾರವನ್ನು ಕಾಡುತ್ತಿದ್ದು, ಇದಕ್ಕಾಗಿಯೇ ಪ್ರಧಾನ ಮಂತ್ರಿ ವಸತಿ ಯೋಜನೆ ಸೇರಿದಂತೆ ಯೋಜನೆಗಳನ್ನು ಹೆಸರು ಬದಲಾವಣೆ ಮಾಡಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ನೇತರರದ ಸವಿತಾ ಟೀಚರ್, ಎಂ. ಜನನಿ, ಪುಷ್ಪಾ ಗೋಪಾಲನ್, ಪ್ರಮೀಳಾ ಮಜಲ್, ಯಶೋದಾ ಮೊದಲದವರು ಉಪಸ್ಥಿತರಿದ್ದರು.




