ಕೊಚ್ಚಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಾಜಿ ಅಬಕಾರಿ ಸಚಿವ ಮತ್ತು ಹಾಲಿ ಶಾಸಕ ಕೆ. ಬಾಬು ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ.) ಆರೋಪಪಟ್ಟಿ ಸಲ್ಲಿಸಿದೆ.
ಜುಲೈ 2007 ರಿಂದ ಜನವರಿ 25, 2016 ರ ನಡುವೆ ಬಾಬು ತನ್ನ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪತ್ತೆಮಾಡಿದೆ. ಅವರು 25.82 ಲಕ್ಷ ರೂ. ಮೌಲ್ಯದ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ವಿಜಿಲೆನ್ಸ್ ಪ್ರಕರಣ ದಾಖಲಾಗಿದ್ದು, ಜಾರಿ ನಿರ್ದೇಶನಾಲಯವು ಕಾನೂನು ಕ್ರಮ ಜರುಗಿಸಿದೆ. ಇಡಿ ಬಾಬು ಅವರ ಅಷ್ಟೇ ಮೊತ್ತದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಹ ಕ್ರಮ ಕೈಗೊಂಡಿತ್ತು.
ಆಗಸ್ಟ್ 31, 2016 ರಂದು ಬಾಬು ವಿರುದ್ಧ ವಿಜಿಲೆನ್ಸ್ ಪ್ರಕರಣ ದಾಖಲಿಸಿತು. ಬಾಬು ಅಕ್ರಮವಾಗಿ ಗಳಿಸಿದ ಹಣವನ್ನು ಚರ ಮತ್ತು ಸ್ಥಿರ ಆಸ್ತಿಯಾಗಿ ಖರೀದಿಸಿ ಅದನ್ನು ತನ್ನ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪತ್ತೆಹಚ್ಚಿತು. ಬಾಬು ಈಗ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ವಿಜಿಲೆನ್ಸ್ ದಾಖಲಿಸಿದ ಎಫ್‍ಐಆರ್‍ನಲ್ಲಿ ಅವರು 100 ಕೋಟಿ ರೂಪಾಯಿ ಅಕ್ರಮ ಸಂಪತ್ತು ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ, ಅದು ನ್ಯಾಯಾಲಯಕ್ಕೆ ತಲುಪಿದಾಗ, ಅದನ್ನು 25 ಲಕ್ಷಕ್ಕೆ ಇಳಿಸಲಾಯಿತು.





