ಕಾಸರಗೋಡು: ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆ ಅಂಗವಾಗಿ ಕಾಸರಗೋಡು ಪ್ರೆಸ್‍ಕ್ಲಬ್ ಹಾಗೂ ಜಿಲ್ಲಾ ಅರಣ್ಯ ಇಲಾಖೆ ಸಹಕಾರದೊಂದಿಗೆ ಮುಳಿಯಾರು ಸಂರಕ್ಷಿತಾರಣ್ಯ ಪ್ರೇಶದಲ್ಲಿ ಕಾಡುಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಚೆಕ್‍ಡ್ಯಾಮ್‍ಗಳ ನಿರ್ಮಾಣಕಾರ್ಯ ನಡೆಸಲಾಯಿತು. ಕೇರಳ ಅರಣ್ಯ ಇಲಾಖೆಯ'ಅರಣ್ಯ ನೀರು ಯೋಜನೆ'ಯನ್ವಯಕಾರ್ಯಕ್ರಮ ಆಯೋಜಿಸಲಾಗಿದೆ.
ಕಾಸರಗೋಡು ನಗರದಿಂದ ಸುಮಾರು 20ಕಿ.ಮೀ ದೂರದ ಬೋವಿಕ್ಕಾನ-ಇರಿಯಣ್ಣಿ-ಬೇಪು ರಸ್ತೆಯ ಅರಣ್ಯ ಪ್ರದೇಶ ಚೇಟ್ಟಂನಲ್ಲಿ ಪ್ರೆಸ್‍ಕ್ಲಬ್ ಸದಸ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜತೆಯಾಗಿ ಕಿರು ಅಣೆಕಟ್ಟು ನಿರ್ಮಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಹರಿದು ಪೋಲಾಗುತ್ತಿರುವ ನೀರನ್ನು ಕಲ್ಲು, ಮಣ್ಣು ಬಳಸಿ ತಡೆದು ನಿಲ್ಲಿಸಿ ವನ್ಯಪ್ರಾಣಿಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಕಾಡುಕೋಣ, ಕಡವೆ, ಚಿರತೆ ಸೇರಿದಂತೆ ವನ್ಯಜೀವಿಗಳು ನಿರಂತರ ಸಂಚರಿಸುತ್ತಿರುವ ಕಾನನ ಹಾದಿಯನ್ನು ಗುರುತಿಸಿ, ಇಂತಹ ಪ್ರದೇಶದಲ್ಲಿ ಚೆಕ್‍ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿ ಬೇಸಿಗೆಯಲ್ಲಿ ಕಾಡುಪ್ರಾಣಿಗಳ ನೀರಿನ ದಾಹ ತಣಿಸಲು ಇಲಾಖೆ ಕ್ರಮ ಕೈಗೊಳ್ಳುತ್ತಿರುವುದಾಗಿ ಜಿಲ್ಲಾ ಅರಣ್ಯಾಧಿಕಾರಿ ಕೆ.ಅಶ್ರಫ್ ತಿಳಿಸಿದರು.
ಕಾಸರಗೋಡು ಪ್ರೆಸ್‍ಕ್ಲಬ್ ಅಧ್ಯಕ್ಷ ಶಿಜು ಕಣ್ಣನ್, ಪ್ರಧಾನ ಕಾರ್ಯದರ್ಶಿ ಪ್ರದೀಪ್‍ನಾರಾಯಣ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪದ್ಮೇಶ್ ಕೆ.ವಿ, ಜತೆಕಾರ್ಯದರ್ಶಿ ಪುರುಷೋತ್ತಮ್ ಪೆರ್ಲ, ಕಾರ್ಯಕಾರಿ ಸಮಿತಿ ಸದಸ್ಯ ರಂಜಿತ್ ಮನ್ನಿಪ್ಪಾಡಿ, ಅರಣ್ಯ ಇಲಾಖೆ ಅದಿಕಾರಿಗಳು, ಸಿಬ್ಬಂದಿ ನೇತೃತ್ವ ನೀಡಿದರು. ಅರಣ್ಯ ನೀರು ಯೋಜನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಚೆಕ್‍ಡ್ಯಾಮ್ ನಿರ್ಮಾಣಕಾರ್ಯದಲ್ಲಿ ಕೈಜೋಡಿಸಿದ್ದರು.






