HEALTH TIPS

ಬದಿಯಡ್ಕಕ್ಕೆ ತುರ್ತಾಗಿ ಬೇಕಾಗಿದೆ ಉಪಖಜಾನೆ ಕೇಂದ್ರ: ನಾಲ್ಕು ದಶಕಗಳ ಬೇಡಿಕೆ ಈಡೇರಿಸುವ ನಿರೀಕ್ಷೆಯಲ್ಲಿ ಜನತೆ

ಬದಿಯಡ್ಕ: ಬದಿಯಡ್ಕ ಪ್ರದೇಶಕ್ಕೆ ಉಪ ಖಜಾನೆ ಮಂಜೂರುಗೊಳಿಸುವ ಬಗೆಗಿನ ದೀರ್ಘ ಕಾಲದ ಬೇಡಿಕೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಹಲವಾರು ಸರ್ಕಾರಿ ಕಚೇರಿಗಳು, ಶಾಲೆಗಳು, ಪ್ರೀಮೆಟ್ರಿಕ್ ಹಾಸ್ಟೆಲ್, ವೈದ್ಯಕೀಯ ಕಾಲೇಜು ಅಸ್ಪತ್ರೆ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳಿರುವ ಬದಿಯಡ್ಕ ಪೇಟೆಗೆ ಉಪ ಖಜಾನೆ ಮಂಜೂರುಗೊಳಿಸಿ ನೀಡುವಲ್ಲಿ ಸರ್ಕಾರ ಆದ್ಯತೆ ಕಲ್ಪಿಸುವಂತೆ ಹಲವಾರು ಸಂಘಟನೆಗಳೂ ಆಗ್ರಹಿಸಿದೆ. ಬದಿಯಡ್ಕದಲ್ಲಿ ಉಪಖಜಾನೆ ಸ್ಥಾಪಿಸುವ ಬಗ್ಗೆ ರಾಜ್ಯ ಹಣಕಾಸು ಕಾರ್ಯದರ್ಶಿ ನಡೆಸಿರುವ ಅದ್ಯಯನ ವರದಿಯಲ್ಲೂ  ಉಲ್ಲೇಖಿಸಲಾಗಿದೆ. ಇನ್ನು ಬದಿಯಡ್ಕದಲ್ಲಿ ಉಪ ಖಜಾನೆ ಸ್ಥಾಪಿಸುವುದಿದ್ದಲ್ಲಿ ಎಲ್ಲ ರೀತಿಯ ನೆರವು ನೀಡಲು ಬದಿಯಡ್ಕ ಗ್ರಾಮ ಪಂಚಾಯಿತಿ ತಯಾರಿರುವುದಾಗಿ ತಿಳಿಸಿದ್ದರೂ, ಸರ್ಕಾರ ಇಚ್ಛಾಶಕ್ತಿ ಪ್ರಕಟಿಸುತ್ತಿಲ್ಲ.


ಪ್ರಯೋಜನಕಾರಿ ಕಚೇರಿ...: 

ಬದಿಯಡ್ಕದಲ್ಲಿ ಉಪಖಜಾನೆ ಆರಂಭಗೊಂಡಲ್ಲಿ ಕಾರಡ್ಕ, ಬೆಳ್ಳೂರು, ಕುಂಬ್ಡಾಜೆ, ಬದಿಯಡ್ಕ, ಎಣ್ಮಕಜೆ ಹಾಗೂ ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಜನತೆಗೆ ಹೆಚ್ಚಿನ ಪ್ರಯೋಜನ ಲಭಿಸಲಿದೆ. ಈ ಪ್ರದೇಶದ ಜನರೆಲ್ಲರೂ ಪ್ರಸಕ್ತ ಕಾಸರಗೋಡಿನ ಜಿಲ್ಲಾ ಖಜನೆ ಹಾಗೂ ಮಂಜೇಶ್ವರದಲ್ಲಿರುವ ಉಪ ಖಜಾನೆಯನ್ನು ಆಶ್ರಯಿಸುತ್ತಿದ್ದಾರೆ. ಬದಿಯಡ್ಕದಲ್ಲಿ ಉಪಖಜಾನೆ ಅರಂಭಗೊಂಡಲ್ಲಿ ಈ ಎಲ್ಲ ಪಂಚಾಯಿತಿ ವ್ಯಾಪ್ತಿಯ ಜನತೆಗೆ 10ರಿಂದ 35ಕಿ.ಮೀ  ವ್ಯಾಪ್ತಿಯೊಳಗೆ  ಉಪ ಖಜಾನೆ ಸೇವೆ ಲಭ್ಯವಾದಂತಾಗಲಿದೆ. ಈ ಎಲ್ಲಾ ಪಂಚಾಯಿತಿಗಳಲ್ಲಿ ಗ್ರಾಮಾಧಿಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆ, ಕೃಷಿ ಭವನ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು, 70ಕ್ಕೂ ಹೆಚ್ಚು ಶಾಲೆಗಳಿವೆ. ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರವಾಗಿ ನೋಂದವಣಾ ಕಚೇರಿ, ಗ್ರಾಮಾಧಿಕಾರಿ ಕಚೇರಿ, ಉಪಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ, ಕೆಎಸ್‍ಎಫ್‍ಇ, ಪೊಲೀಸ್ ಠಾಣೆ, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿವೆ. ಹಲವಾರು ಬ್ಯಾಂಕ್‍ಗಳಿವೆ. 

ಬದಿಯಡ್ಕದಲ್ಲಿ ಉಪ ಖಜಾನೆ ಆರಂಭಗೊಂಡಲ್ಲಿ ಕಾಸರಗೋಡಿನ ಉಪಖಜಾನೆಯಲ್ಲಿ ಕೆಲಸದ ಹೊರೆ ಕಡಿಮೆಯಾಗುವುದರ ಜತೆಗೆ ಕಾರ್ಯಕ್ಷಮತೆಯೂ ಹೆಚ್ಚಲಿದೆ. ಈಗಾಗಲೇ ಬದಿಯಡ್ಕ ಗ್ರಾಮ ಪಂಚಾಯಿತಿ ಕಟ್ಟಡ ಸೌಕರ್ಯ ಒದಗಿಸಿಕೊಡುವ ಭರವಸೆ ನೀಡಿದ್ದು, ಉಪ ಖಜಾನೆ ಅಧಿಕಾರಿ, ಜ್ಯೂನಿಯರ್ ಸೂಪರಿಂಟೆಂಡೆಂಟ್, ಟ್ರಶರರ್, ಕಚೇರಿ ಸಹಾಯಕ, ಅರೆಕಾಲಿಕ ಸ್ವೀಪರ್ ಹುದ್ದೆಗಳ ನೇಮಕ ನಡೆಸಬೇಕಾಗಿದ್ದು, ಇವರೆಲ್ಲರಿಗೂ ವಾರ್ಷಿಕ ವೇತನವಾಗಿ 39.65ಲಕ್ಷ ರೂ. ಮಾತ್ರ ವೆಚ್ಚವಾಗಲಿದೆ.

ಹೋರಾಟಕ್ಕಿಲಿದ ಕ್ರಿಯ ಸಮಿತಿ :

ಬದಿಯಡ್ಕದಲ್ಲಿ ಉಪ ಖಜಾನೆ ಶೀಘ್ರ ಕಾರ್ಯಾರಂಭಿಸುವ ನಿಟ್ಟಿನಲ್ಲಿ ಕ್ರಿಯಾಸಮಿತಿ ಮೂಲಕ ಹೋರಾಟ ಅರಂಭಿಸಲಾಗಿದೆ. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಶಾಂತಾ ಅವರ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ ಕ್ರಿಯಾಸಮಿತಿಯೊಂದನ್ನು ರಚಿಸಲಾಗಿದೆ. ಮಾಹಿನ್ ಕೇಲೋಟ್ ಅದ್ಯಕ್ಷ, ಶ್ರೀಕಾಂತ್ ಕನ್ವೀನರ್, ನಾರಾಯಣ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಗಿದ್ದು, ಈ ಮೂಲಕ ಸರ್ಕಾರಕ್ಕೆ ಒತ್ತಡ ಹೇರುವುದರ ಜತೆಗೆ ವಿವಿದ ರೀತಿಯ ಹೋರಾಟ ಕೈಗೊಳ್ಳುವ ಬಗ್ಗೆಯೂ ಸಮಿತಿ ತೀರ್ಮಾನಿಸಿದೆ.



ಅಭಿಮತ:

ಬದಿಯಡ್ಕದಲ್ಲಿ ಉಪಖಜಾನೆ ಆರಂಭಿಸುವಂತೆ ನಾಲ್ಕು ದಶಕಗಳ ಹಿಂದೆಯೇ ಬೆಡಿಕೆಯಿರಿಸಲಗಿತ್ತು. ಕನ್ನಡ ಹೋರಾಟಗಾರ, ವಕೀಲ ಯು.ಪಿ ಕುಣಿಕುಳ್ಳಾಯ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ, ನಂತರದ ದಿನಗಳಲ್ಲಿ ಹೋರಾಟ ಕಾವು ಕಳೆದುಕೊಂಡಿತ್ತು. ಸುದೀರ್ಘ ಅವಧಿ ನಂತರ ಮತ್ತೆ ಉಪಖಜಾನೆ ಬೇಡಿಕೆ ಮುನ್ನೆಲೆಗೆ ಬಂದಿರುವುದು ಶ್ಲಾಘನೀಯ. ಸರ್ಕಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಕಚೇರಿ ಮಂಜೂರುಗೊಳಿಸುವ ಮೂಲಕ ಬಹುಜನರ ಬೇಡಿಕೆಯೊಂದನ್ನು ಈಡೇರಿಸಲು ಮುಂದಗಬೇಕು.

ಟಿ. ಶಂಕರನಾರಾಯಣ ಭಟ್, 

ಕನ್ನಡ ಹೋರಾಟಗಾರರು, ಕಾಸರಗೋಡು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries