ನವದೆಹಲಿ: ಭಾಷೆಯ ವಿಚಾರದಲ್ಲಿ ದೇಶ ಹಲವು ಸಮಸ್ಯೆಗಳನ್ನು ಎದುರಿಸಿದ್ದು, ಅದು ಮರುಕಳಿಸಬಾರದು ಎಂಬ ಸದುದ್ದೇಶದ ಹೊರತಾಗಿ ಕೆಲವರು ತಮ್ಮ ಭ್ರಷ್ಟಾಚಾರವನ್ನು ಮರೆಮಾಚಿಸಲು ಭಾಷೆಯ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಡಿಎಂಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಗೃಹ ಸಚಿವಾಲಯದ ಕಾರ್ಯನಿರ್ವಹಣೆಯ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಶಾ ಅವರು, 'ದೇಶದ ಎಲ್ಲ ನಾಗರಿಕರು, ಮುಖ್ಯಮಂತ್ರಿಗಳು ಮತ್ತು ಸಂಸದರ ಜೊತೆಗೆ ಡಿಸೆಂಬರ್‌ನಿಂದ ಅವರವರ ಭಾಷೆಯಲ್ಲಿ ಸಂವಹನ ನಡೆಸುತ್ತೇವೆ. ತಮ್ಮ ಭ್ರಷ್ಟಚಾರವನ್ನು ಮರೆಮಾಚಲು ಭಾಷೆಯ ವಿಚಾರವನ್ನು ಬಳಸಿಕೊಳ್ಳುತ್ತಿರುವವರಿಗೆ ಇದು ದಿಟ್ಟ ಉತ್ತರವಾಗಿರುತ್ತದೆ' ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಲಾಗಿರುವ ತ್ರಿಭಾಷಾ ಸೂತ್ರಕ್ಕೆ ತಮಿಳುನಾಡಿನ ಡಿಎಂಕೆ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಅವರು ತಿರುಗೇಟು ನೀಡಿದರು. ಆದರೆ ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆಯನ್ನು ಡಿಎಂಕೆ ವಿರೋಧಿಸುತ್ತಿರುವ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕ್ಷೇತ್ರವಿಂಗಡಣೆ ಬಗ್ಗೆ ಕಳವಳ:
ತಮಿಳುನಾಡಿನಂತಹ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯವನ್ನು ಸಂಸತ್ತಿನಲ್ಲಿ ರಕ್ಷಿಸುವ ಸಲುವಾಗಿ 1971ರ ಜನಗಣತಿಯ ಅಧಾರದಲ್ಲಿ ಕ್ಷೇತ್ರವಿಂಗಡಣೆ ಮಾಡಬೇಕು ಎಂದು ಡಿಎಂಕೆ ನಾಯಕ ಎಂ.ಷಣ್ಮುಗಂ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.




