ನವದೆಹಲಿ: ಭವಿಷ್ಯದಲ್ಲಿ ಅತಿ ಹೆಚ್ಚು ಬಿಸಿಗಾಳಿ ಎದುರಿಸಲಿರುವ ಭಾರತದ ಕೆಲವು ನಗರಗಳು ದೀರ್ಘಾವಧಿಯ ಪರಿಣಾಮಕಾರಿ ಕ್ರಮಗಳ ಬದಲು ತಾತ್ಕಾಲಿಕ ಕ್ರಮಗಳ ಮೊರೆ ಹೋಗುತ್ತಿವೆ ಎಂದು ಅಧ್ಯಯನವೊಂದು ತಿಳಿಸಿದೆ.
ನವದೆಹಲಿ ಮೂಲದ 'ಸಸ್ಟೈನಬಲ್ ಫ್ಯೂಚರ್ ಕೊಲಾಬರೇಟಿವ್' ಸಂಶೋಧನಾ ಸಂಸ್ಥೆಯು ಈ ಬಗ್ಗೆ ವಿಶ್ಲೇಷಣಾತ್ಮಕ ವರದಿ ನೀಡಿದೆ.
ಹೆಚ್ಚುತ್ತಿರುವ ಬಿಸಿಗಾಳಿ ಎದುರಿಸಲು ಬೆಂಗಳೂರು, ದೆಹಲಿ, ಫರೀದಾಬಾದ್, ಗ್ವಾಲಿಯರ್, ಕೋಟಾ, ಲುಧಿಯಾನ, ಮೀರಠ್, ಮುಂಬೈ ಮತ್ತು ಸೂರತ್ ಕೈಗೊಂಡ ಕ್ರಮಗಳ ಬಗ್ಗೆ ಅದು ವಿಶ್ಲೇಷಿಸಿದೆ. ಈ ನಗರಗಳು ಭಾರತದ ನಗರ ಪ್ರದೇಶದ ಜನಸಂಖ್ಯೆಯ ಶೇ 11ರಷ್ಟನ್ನು ಒಳಗೊಂಡಿವೆ.
ಈ ಒಂಬತ್ತು ನಗರಗಳೂ ಬಿಸಿಗಾಳಿ ಎದುರಿಸಲು ಅಲ್ಪಾವಧಿ ಕ್ರಮಗಳತ್ತ ಮಾತ್ರ ಹೆಚ್ಚು ಗಮನ ನೀಡುತ್ತಿವೆ ಎಂದು ವರದಿ ಹೇಳಿದೆ.
ಭಾರತವು ದೀರ್ಘಾವಧಿಯ ಪರಿಣಾಮಕಾರಿ ಕ್ರಮಗಳನ್ನು ಅನುಷ್ಠಾನ ಮಾಡದಿದ್ದರೆ, ಭವಿಷ್ಯದಲ್ಲಿ ಬಿಸಿಗಾಳಿಗೆ ಸಂಬಂಧಿಸಿದ ಹೆಚ್ಚು ಹೆಚ್ಚು ಸಾವುಗಳಿಗೆ ಸಾಕ್ಷಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಬಹುತೇಕ ನಗರಗಳು ಕುಡಿಯುವ ನೀರಿನ ವ್ಯವಸ್ಥೆ, ಕೆಲಸದ ಅವಧಿಯಲ್ಲಿ ಬದಲಾವಣೆ, ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯದ ಏರಿಕೆಯಂಥ ಅಲ್ಪಾವಧಿ ಕ್ರಮಗಳನ್ನು ಮಾತ್ರ ಅಳವಡಿಸಿಕೊಳ್ಳುತ್ತಿವೆ ಎಂದು ಅದು ಹೇಳಿದೆ.
ಗಿಡಗಳನ್ನು ನೆಡುವುದು, ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಕೆಯಂಥ ಕ್ರಮಗಳನ್ನು ಅಳವಡಿಸುವಲ್ಲಿ ಈ ನಗರಗಳು ಹಿಂದೆ ಬಿದ್ದಿವೆ ಎಂದು ತಿಳಿಸಿದೆ.
ಈ ನಗರಗಳು ಅಲ್ಪ ಬಜೆಟ್‌ನಲ್ಲಿಯೇ ಬಿಸಿಗಾಳಿ ಎದುರಿಸಲು ಕ್ರಮ ಕೈಗೊಳ್ಳುತ್ತಿವೆ. ಆದರೆ ನಗರದ ಕೂಲಿಂಗ್, ಮೂಲಭೂತ ಸೌಕರ್ಯಗಳ ಸುಧಾರಣೆಗಾಗಿಯೇ ಅನುದಾನ ಮೀಸಲಿಡಬೇಕಾದ ಅಗತ್ಯವಿದೆ ಎಂದು ತಿಳಿಸಿದೆ.




