HEALTH TIPS

Earthquake | 1,600 ದಾಟಿದ ಸಾವಿನ ಸಂಖ್ಯೆ

ಬ್ಯಾಂಕಾಕ್/ಮಾಂಡಲೆ: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪನ ದಿಂದಾಗಿ 1,644 ಮಂದಿ ಮೃತಪಟ್ಟಿದ್ದಾರೆ. ಭೂಕಂಪನದ ಪರಿಣಾಮಕ್ಕೆ ಕುಸಿದುಬಿದ್ದ ಕಟ್ಟಡಗಳ ಅವಶೇಷಗಳ ಅಡಿಯಿಂದ ನೂರಾರು ಜನರ ಮೃತದೇಹಗಳನ್ನು ಶನಿವಾರ ಹೊರತೆಗೆಯಲಾಗಿದೆ.

3,408 ಜನರಿಗೆ ಗಾಯಗಳಾಗಿವೆ, 139 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರ ಹೇಳಿದೆ.

ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಮ್ಯಾನ್ಮಾರ್‌ನಲ್ಲಿ ನಾಗರಿಕ ಕಲಹ ವರ್ಷಗಳಿಂದ ಇದೆ. ಹೀಗಾಗಿ, ದೇಶದ ಎಲ್ಲ ಕಡೆಗಳಿಗೆ ತೆರಳುವುದು ಅಪಾಯಕಾರಿಯಾಗಿದೆ. ಇದು ಪರಿಹಾರ ಕಾರ್ಯ ಕೈಗೊಳ್ಳುವವರಿಗೆ ಸಮಸ್ಯೆ ತಂದೊಡ್ಡಿದೆ.

ಮ್ಯಾನ್ಮಾರ್‌ನ ರಾಜಧಾನಿ ನೇಪೀಡಾದಲ್ಲಿ ಹಾನಿಗೀಡಾದ ರಸ್ತೆಗಳನ್ನು ಸರಿಪಡಿಸುವ ಕಾರ್ಯ ಸಾಗಿದೆ. ವಿದ್ಯುತ್‌ ಮತ್ತು ಇಂಟರ್ನೆಟ್ ಸೇವೆಗಳು ನಗರದ ಬಹುತೇಕ ಕಡೆ ಕಡಿತಗೊಂಡಿವೆ.

ಥಾಯ್ಲೆಂಡ್‌ನಲ್ಲಿ ಹಾನಿ:

ನೆರೆಯ ಥಾಯ್ಲೆಂಡ್‌ನಲ್ಲಿ 1.7 ಕೋಟಿ ಜನರು ವಾಸಿಸುವ ಗ್ರೇಟರ್ ಬ್ಯಾಂಕಾಕ್ ಪ್ರದೇಶ ಸೇರಿ ಹಲವೆಡೆ ಹಾನಿ ಉಂಟಾಗಿದೆ. ಇಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕಾಕ್‌ನಲ್ಲಿ 47 ಮಂದಿ ನಾಪತ್ತೆ ಯಾಗಿದ್ದಾರೆ. ಕುಸಿದುಬಿದ್ದ ಕಟ್ಟಡಗಳ ಅವಶೇಷಗಳನ್ನು ತೆರವು ಮಾಡಲು ಭಾರಿ ಗಾತ್ರದ ಯಂತ್ರಗಳನ್ನು ಶನಿವಾರ ತರಲಾಗಿದೆ.

ನೆರವಿಗೆ ಯಾಚನೆ:

ಮ್ಯಾನ್ಮಾರ್‌ನಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವವರು ಸಹ ಸಹಾಯ ಯಾಚಿಸುತ್ತಿದ್ದಾರೆ. ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕೆಲಸದಲ್ಲಿ ಅವರು ತೊಡಗಿದ್ದಾರೆ.

ಭೂಕಂಪನದ ನಡುವೆ ಜೀವ ಉಳಿಸಿಕೊಂಡವರು ಹತ್ತಿರದ ಮರಗಳಡಿ ರಾತ್ರಿ ಕಳೆದಿದ್ದಾರೆ. ಕುಸಿದ ಕಟ್ಟಡಗಳ ಆಸುಪಾಸಿನಲ್ಲಿ ರಕ್ಷಣಾ ಕಾರ್ಯಕರ್ತರು ಗಟ್ಟಿ ದನಿಯಲ್ಲಿ ಕೂಗುತ್ತಿದ್ದಾರೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಯಾರದ್ದಾದರೂ ದನಿ ಕೇಳಿಬರಬಹುದು ಎಂಬುದು ಅವರ ನಿರೀಕ್ಷೆ.

ಮ್ಯಾನ್ಮಾರ್‌ನ ಮಿಲಿಟರಿ ಆಡಳಿತವು ಈ ಬಾರಿ ನೆರವು ಬೇಕು ಎಂದು ವಿಶ್ವ ಸಮುದಾಯದ ಎದುರು ಬೇಡಿಕೆ ಮಂಡಿಸಿದೆ. ಇದು ಭೂಕಂಪನದ ತೀವ್ರತೆಯನ್ನು ಹೇಳುತ್ತಿದೆ.

ನೆರವಿನ ಹಸ್ತ ಚಾಚಿದ ಭಾರತ

ನವದೆಹಲಿ: ಮ್ಯಾ‌ನ್ಮಾರ್‌ನಲ್ಲಿ ನೆರವು ಕಾರ್ಯಾಚರಣೆಗೆ ಕೈಜೋಡಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ (ಎನ್‌ಡಿಆರ್‌ಎಫ್‌) 80 ಮಂದಿಯ ತುಕಡಿಯನ್ನು ಭಾರತವು ಕಳುಹಿಸಲಿದೆ. 'ಆಪರೇಷನ್ ಬ್ರಹ್ಮ' ಅಡಿಯಲ್ಲಿ ಈ ತುಕಡಿಯನ್ನು ರವಾನಿಸಲಾಗುತ್ತಿದೆ.

ನೆರೆಯ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ ದೇಶಗಳು ಭೂಕಂಪನದಿಂದ ನಲುಗಿದ ನಂತರ 'ಆಪರೇಷನ್ ಬ್ರಹ್ಮ' ಹೆಸರಿನಲ್ಲಿ ನೆರವಿನ ಹಸ್ತ ಚಾಚಿರುವ ಭಾರತವು, ಮ್ಯಾನ್ಮಾರ್‌ಗೆ 15 ಟನ್‌ಗಳಷ್ಟು ಪರಿಹಾರ ಸಾಮಗ್ರಿ ರವಾನಿಸಿದೆ.

ಡೇರೆಗಳು, ಹೊದಿಕೆ, ಸೇವಿಸಲು ಸಿದ್ಧವಾಗಿರುವ ಊಟ, ನೀರು ಶುದ್ಧೀಕರಣ ಯಂತ್ರ, ಸೌರದೀಪಗಳು, ವಿದ್ಯುತ್ ಜನರೇಟರ್‌ಗಳು, ಅಗತ್ಯ ಔಷಧಗಳನ್ನು ಹೊತ್ತ ವಾಯುಪಡೆಯ ವಿಮಾನವು ಮ್ಯಾನ್ಮಾರ್‌ನ ಯಾಂಗೂನ್‌ ನಗರಕ್ಕೆ ತೆರಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಎರಡು ವಿಮಾನಗಳಲ್ಲಿ ಅಗತ್ಯ ವಸ್ತುಗಳನ್ನು ಭಾರತದಿಂದ ಕಳುಹಿಸಲಾಗುತ್ತದೆ. ಜೊತೆಗೆ, ನೌಕಾಪಡೆಯ ಎರಡು ಹಡಗುಗಳು ಕೂಡ ನೆರವಿಗೆ ಮ್ಯಾನ್ಮಾರ್‌ನತ್ತ ಧಾವಿಸಲಿವೆ.

ಮೋದಿ ಮಾತುಕತೆ:

ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ಮುಖ್ಯಸ್ಥ ಮಿನ್ ಆಂಗ್ ಹ್ಲಾಯಿಂಗ್‌ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾತನಾಡಿದ್ದಾರೆ, ಭಾರತವು ಮ್ಯಾನ್ಮಾರ್‌ನ ನೆರವಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries