ಪಣಜಿ: ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಾದ ಗೋವಾದ ಅಂಜುನಾ ಗ್ರಾಮ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಡೆದ ₹1,000 ಕೋಟಿ ಮೌಲ್ಯದ ಭೂ ಹಗರಣವನ್ನು ಭೇದಿಸಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.
ಈ ಪ್ರಕರಣ ಸಂಬಂಧ ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರ್ಡೆಜ್ ತಾಲ್ಲೂಕು ವ್ಯಾಪ್ತಿಯಲ್ಲಿರುವ ಪ್ರವಾಸಿಗರ ನೆಚ್ಚಿನ ತಾಣಗಳಾದ ಅಂಜುನಾ, ಅರ್ಪೊರಾ ಮತ್ತು ಅಸಾಗಾಂವ್‌ನಲ್ಲಿ ಬೇರೊಬ್ಬರಿಗೆ ಸೇರಿದ ₹1,000 ಕೋಟಿ ಮೀರಿದ ಹಲವು ಲಕ್ಷ ಚದರ ಅಡಿ ಜಮೀನನ್ನು ಬೇರೊಬ್ಬ ವ್ಯಕ್ತಿಯ ಸೋಗು, ಕಂದಾಯ ದಾಖಲೆಗಳನ್ನು ಅಕ್ರಮವಾಗಿ ತಿದ್ದುವುದು, ನಕಲಿ ಹಕ್ಕುಪತ್ರ, ಜಮೀನು ದಾಖಲಾತಿಗಳನ್ನು ತಿರುಚಿ ಅಕ್ರಮವಾಗಿ ಪರಭಾರೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ₹600 ಕೋಟಿ ಮೌಲ್ಯದ ಜಮೀನಿನ ಮೂಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಚರ ಇಲಾಖೆ ಮತ್ತು ಆ ಬಳಿಕ ನಡೆದ ಹಣಕಾಸು ತನಿಖೆಯಿಂದ 2022ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ರೋಹನ್ ಹಾರ್ಮಾಲ್ಕರ್ ಎಂಬುವರು ಈ ಪ್ರಕರಣದ ರೂವಾರಿ ಎಂದು ಗೊತ್ತಾಗಿದೆ. ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಗುರುವಾರ ಮತ್ತು ಶುಕ್ರವಾರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ಸಂಪಾದಿಸಲಾದ ಹಣವನ್ನು ವಿವಿಧ ವ್ಯಕ್ತಿಗಳು ಮತ್ತು ಬೇನಾಮಿ ಸಂಸ್ಥೆಗಳ ಮೂಲಕ ರಿಯಲ್ ಎಸ್ಟೇಟ್, ಐಷಾರಾಮಿ ವಾಹನಗಳು ಮತ್ತು ಸೇರಿದಂತೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ವಸ್ತುಗಳ ಮೇಲೆ ಹೂಡಿಕೆ ಮಾಡಲಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ.




