ನವದೆಹಲಿ: 'ದೇಶದ ಪ್ರಗತಿಗೆ ಮೂಲಸೌಕರ್ಯ ಅಭಿವೃದ್ಧಿ ಬಹುಮುಖ್ಯವಾಗಿದೆ. ಹಾಗಾಗಿ, ದಿನಕ್ಕೆ 100 ಕಿ.ಮೀನಷ್ಟು ಹೆದ್ದಾರಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ' ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಮಂಗಳವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಮುಂದಿನ 18 ತಿಂಗಳ ಅವಧಿಯಲ್ಲಿ ದೇಶದ ರಸ್ತೆ ಮೂಲಸೌಕರ್ಯವನ್ನು ಅಮೆರಿಕದ ರಸ್ತೆ ಮೂಲಸೌಕರ್ಯಕ್ಕಿಂತಲೂ ಹೆಚ್ಚು ಉತ್ತಮಪಡಿಸಲಾಗುವುದು' ಎಂದರು.
'ಮುಂಬರುವ ವರ್ಷಗಳಲ್ಲಿ ಕೇಂದ್ರ ಹೆದ್ದಾರಿ ಸಚಿವಾಲಯವು 25 ಸಾವಿರ ಕಿ.ಮೀ ದೂರದಷ್ಟು ದ್ವಿಪಥ ಮತ್ತು ಚತುಷ್ಪಥ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಿದೆ' ಎಂದು ಹೇಳಿದರು.
ಹೆದ್ದಾರಿ ಯೋಜನೆಗಳಿಗೆ ಹಣದ ಕೊರತೆಯಿಲ್ಲ ಎಂದ ಅವರು, 2020-21ರಲ್ಲಿ ದಿನವೊಂದಕ್ಕೆ 37 ಕಿ.ಮೀ ದೂರದಷ್ಟು ಹೆದ್ದಾರಿ ಅಭಿವೃದ್ಧಿಪಡಿಸಲಾಗಿದೆ ಎಂದರು.




