HEALTH TIPS

ಭಾರತದಲ್ಲಿ ಕನಿಷ್ಠ 100 ಮಂದಿಯ ವಾಟ್ಸಾಪ್ ಖಾತೆಗಳಿಗೆ 'ಪೆಗಾಸಸ್' ಕನ್ನ!

ವಾಶಿಂಗ್ಟನ್ : 2019ರಲ್ಲಿ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಳಸಿಕೊಂಡು 1,223 ಮಂದಿಯ ವಾಟ್ಸಾಪ್ ಖಾತೆಗಳ ಹ್ಯಾಕಿಂಗ್ ನಡೆದಿದ್ದು, ಅವರಲ್ಲಿ ಕನಿಷ್ಠ 100 ಮಂದಿ ಭಾರತದಲ್ಲಿ ನೆಲೆಸಿರುವವರದ್ದಾಗಿದೆಯೆಂದು ಅಮೆರಿಕದ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯು ತಿಳಿಸಿದೆ.

ಇಸ್ರೇಲಿನ ಎನ್‌ಎಸ್‌ಓ ಗ್ರೂಪ್ ವಿರುದ್ಧ ವಾಟ್ಸಾಪ್ ಸಲ್ಲಿಸಿದ ಮೊಕದ್ದಮೆಯ ವಿಚಾರಣೆ ಸಂದರ್ಭ ಎಪ್ರಿಲ್ 4ರಂದು ಸಲ್ಲಿಸಲಾದ ವಿವರಣೆಯೊಂದರಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.

ಅಮೆರಿಕ ಮೂಲದ ತಂತ್ರಜ್ಞಾನ ಕಂಪೆನಿ ಮೆಟಾ ಒಡೆತನದ ವಾಟ್ಸಾಪ್ ಹಾಗೂ ಇಸ್ರೇಲ್ ನ ಸೈಬರ್ ಬೇಹುಗಾರಿಕಾ ಸಂಸ್ಥೆ ನಡುವೆ ಕಾನೂನು ಸಮರ ನಡೆಯುತ್ತಿದೆ. ಎಪ್ರಿಲ್ 2019ರಿಂದ ಮೇ 2019ರವರೆಗೆ ವಾಟ್ಸಾಪ್ನ 1400 ಬಳಕೆದಾರರನ್ನು ಗುರಿಯಿರಿಸಿ ಎನ್‌ಎಸ್‌ಓ ಗ್ರೂಪ್ನ ಪೆಗಾಸಸ್ ಸ್ಪೈವೇರ್ ಅನ್ನು ಬಳಸಲಾಗಿದೆ ಎಂದು ಮೆಟಾ ಆಪಾದಿಸಿದೆ.

ಡಿಸೆಂಬರ್ 20ರಂದು ಅಮೆರಿಕದ ಜಿಲ್ಲಾ ನ್ಯಾಯಾಲಯವು ನೀಡಿದ ತೀರ್ಪೊಂದು, 2019ರಲ್ಲಿ ಪೆಗಾಸಸ್ ಸ್ಪೈವೇರ್ ಬಳಸಿಕೊಂಡು 1400 ವಾಟ್ಸಾಪ್ ಖಾತೆಗಳ ಮೇಲೆ ಅನಧಿಕೃತವಾಗಿ ಕಣ್ಗಾವಲು ನಡೆದಿರುವುದಕ್ಕೆ ಎನ್‌ಎಸ್‌ಓ ಗ್ರೂಪ್ ಹೊಣೆಯೆಂದು ಘೋಷಿಸಿತ್ತು.

ಸ್ಪೈವೇರ್ನಿಂದಾಗಿ ವಾಟ್ಸಾಪ್ನ ವರ್ಚಸ್ಸಿಗೆ ಧಕ್ಕೆ ಉಂಟಾಗಿರುವುದರಿಂದ ಅದಕ್ಕೆ ನೀಡಬೇಕಾದ ಪರಿಹಾರದ ಮೊತ್ತವನ್ನು ಪ್ರತ್ಯೇಕ ವಿಚಾರಣೆಯಲ್ಲಿ ನಿರ್ಧರಿಸಲಾಗುವುದೆಂದು ನ್ಯಾಯಾಲಯ ತಿಳಿಸಿದೆ.

ವಿವಿಧ ದೇಶಗಳಲ್ಲಿ ಎರಡು ವಾರಗಳ ಅವಧಿಯಲ್ಲಿ ಪೆಗಾಸಸ್ ಸ್ಪೈವೇರ್ ಬಳಸಿಕೊಂಡು 51 ದೇಶಗಳ 1400ಕ್ಕೂ ಅಧಿಕ ವ್ಯಕ್ತಿಗಳ ವಾಟ್ಸಾಪ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆಯೆಂದು ಮೆಟಾ ಆರೋಪಿಸಿದೆ. ಗರಿಷ್ಠ 456 ವ್ಯಕ್ತಿಗಳು ಹ್ಯಾಕ್ಗೊಳಗಾಗಿರುವ ಮೆಕ್ಸಿಕೊ ಮೊದಲ ಸ್ಥಾನದಲ್ಲಿದೆ. ಭಾರತ (100), ಬಹರೈನ್ (82), ಮೊರೊಕ್ಕೊ (69), ಪಾಕಿಸ್ತಾನ (58), ಇಂಡೊನೇಶ್ಯ (54) ಹಾಗೂ ಇಸ್ರೇಲ್ (51) ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.

ಟರ್ಕಿಯಲ್ಲಿ 26, ಸ್ಪೇನ್ ನಲ್ಲಿ 21 ಹಾಗೂ ಫ್ರಾನ್ಸ್ ನಲ್ಲಿ 7 ಮಂದಿಯನ್ನು ಪೆಗಾಸಸ್ ಗುರಿಯಿರಿಸಿದೆ. ಅಮೆರಿಕದಲ್ಲಿ ಕನಿಷ್ಠ ಓರ್ವ ವ್ಯಕ್ತಿಯನ್ನು, ಕೆನಡಾ ಹಾಗೂ ಬ್ರಿಟನ್ ನಲ್ಲಿ ತಲಾ ಇಬ್ಬರನ್ನು ಗುರಿಯಿರಿಸಲಾಗಿದೆ ಎಂದು ಮೆಟಾ ಸಂಸ್ಥೆ ನ್ಯಾಯಾಲಯಕ್ಕೆ ನೀಡಿದ ವಿವರಣೆಯಲ್ಲಿ ತಿಳಿಸಿದೆ. 2019ರಲ್ಲಿ ಪೆಗಾಸಸ್ ಮೂಲಕ ಹ್ಯಾಕಿಂಗ್ ಗೆ ಗುರಿಯಾದ ವ್ಯಕ್ತಿಗಳ ಗುರುತನ್ನು ಇನ್ನೂ ಸ್ಪಷ್ಟಪಡಿಸಲಾಗಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries