ಇಂಫಾಲ: ಮಣಿಪುರದ ಇಂಫಾಲ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ 10 ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಪಂಬೈ)ನ ನಾಲ್ವರು ಸದಸ್ಯರನ್ನು ಮತ್ತು ಒಬ್ಬ ಸಹಚರನನ್ನು ಇಂಫಾಲ ಪೂರ್ವದ ವಾಂಗ್ಖೈ ತಂಗಪತ್ ಮಾಪನ್‌ನಿಂದ ಶನಿವಾರ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಿಷೇಧಿತ ಪ್ರೆಪಕ್ (PREPAK)ನ ಸದಸ್ಯನನ್ನು ಇಂಫಾಲ ಪಶ್ಚಿಮದ ಲ್ಯಾಂಪೆಲ್‌ಪಟ್‌ನಲ್ಲಿ ಬಂಧಿಸಲಾಯಿತು. ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಕ್ಷದ ಐದು ಸಕ್ರಿಯ ಕಾರ್ಯಕರ್ತರನ್ನು ಇಂಫಾಲ ಪೂರ್ವದ ವಿವಿಧ ಭಾಗಗಳಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಉಗ್ರರು ಇಂಫಾಲ ಕಣಿವೆಯಲ್ಲಿ ಸುಲಿಗೆ ಚಟುವಟಿಕೆಗಳಲ್ಲಿ ಮತ್ತು ಸ್ಥಳೀಯರನ್ನು ಬೆದರಿಸುವಲ್ಲಿ ಭಾಗಿಯಾಗಿದ್ದರು. ಬಂಧಿತರಿಂದ ಬಂದೂಕುಗಳು, ರೈಫಲ್‌ಗಳು ಮತ್ತು ಗ್ರೆನೇಡ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

