ನವದೆಹಲಿ: ದೇಶದಲ್ಲಿ ಮತಾಂತರ ಕುರಿತು ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.
ರಾಜ್ಯಗಳಲ್ಲಿ ಜಾರಿಯಾಗಿರುವ ಮತಾಂತರ ನಿಷೇಧ ಕಾಯ್ದೆಯನ್ನು ಪ್ರಶ್ನಿಸಿ ಕೆಲವು ಅರ್ಜಿಗಳು ಸಲ್ಲಿಕೆಯಾದರೆ, ಇನ್ನು ಕೆಲವು ಅರ್ಜಿಗಳು ಬಲವಂತದ ಮತಾಂತರ ನಿಷೇಧಿಸಬೇಕು ಎಂದು ಕೋರಿವೆ.
ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ.ವಿ ವಿಶ್ವನಾಥನ್ ಅವರಿರುವ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
2023ರ ಜನವರಿಯಲ್ಲಿ ಈ ಪೈಕಿ ಸಲ್ಲಿಸಲಾದ ಒಂದು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, 'ಧಾರ್ಮಿಕ ಪರಿವರ್ತನೆ ಗಂಭೀರ ವಿಷಯವಾಗಿದ್ದು, ಅದಕ್ಕೆ ರಾಜಕೀಯ ಬಣ್ಣ ನೀಡಬಾರದು' ಎಂದು ಹೇಳಿತ್ತು
ಮೋಸದಿಂದ ಮಾಡಿದ ಮತಾಂತರದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದ ಅರ್ಜಿಯ ಬಗ್ಗೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿಯವರ ಸಹಾಯ ಕೋರಿತ್ತು.
ಬೆದರಿಕೆ, ಉಡುಗೊರೆ ಮತ್ತು ಹಣಕಾಸಿನ ಪ್ರಯೋಜನಗಳ ಮೂಲಕ ಮೋಸಗೊಳಿಸುವ ಆಮಿಷ'ದ ಮತಾಂತರಗಳನ್ನು ತಡೆಯುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
ಹೈಕೋರ್ಟ್‌ಗಳಿಂದ ಸುಪ್ರೀಂ ಕೋರ್ಟ್‌ಗೆ ಪ್ರಕರಣಗಳನ್ನು ವರ್ಗಾಯಿಸಲು ಒಂದೇ ಅರ್ಜಿಯನ್ನು ಸಲ್ಲಿಸಿ ಎಂದು ಹಲವು ರಾಜ್ಯಗಳ ಮತಾಂತರ ನಿಷೇಧ ಕಾಯ್ದೆಯನ್ನ ಪ್ರಶ್ನಿಸಿರುವ ಅರ್ಜಿದಾರರಿಗೆ 2023ರಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಅಲಹಾಬಾದ್ ಹೈಕೋರ್ಟ್‌ನಲ್ಲಿ ಇಂತಹ ಕನಿಷ್ಠ ಐದು, ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ 7, ಗುಜರಾತ್ ಹಾಗೂ ಜಾರ್ಖಂಡ್ ಹೈಕೋರ್ಟ್‌ನಲ್ಲಿ ತಲಾ ಎರಡು, ಹಿಮಾಚಲ ಪ್ರದೇಶ ಹೈಕೋರ್ಟ್‌ನಲ್ಲಿ 3 ಹಾಗೂ ಕರ್ನಾಟಕ ಹಾಗೂ ಉತ್ತರಾಖಂಡ ಹೈಕೋರ್ಟ್‌ನಲ್ಲಿ ತಲಾ 1 ಅರ್ಜಿ ಬಾಕಿ ಇವೆ ಎನ್ನುವುದನ್ನೂ ಸುಪ್ರೀಂ ಕೋರ್ಟ್ ಅಂದು ಗಮನಿಸಿತ್ತು.
ಮತಾಂತರದ ಕುರಿತಾದ ತಮ್ಮ ಕಾನೂನುಗಳ ಕೆಲವು ನಿಯಮಗಳಿಗೆ ತಡೆ ನೀಡಿದ ಹೈಕೋರ್ಟ್‌ಗಳ ಮಧ್ಯಂತರ ತೀರ್ಪಿನ ಕುರಿತು ಗುಜರಾತ್ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಸಲ್ಲಿಸಿರುವ ಎರಡು ಅರ್ಜಿಯೂ ವಿಚಾರಣೆ ಹಂತದಲ್ಲಿದೆ.
ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದ ಮತಾಂತರ ನಿಷೇಧ ಕಾಯ್ದೆಯನ್ನು ಪ್ರಶ್ನಿಸಿ ಜಮಿಯತ್-ಉಲಮಾ-ಎ-ಹಿಂದ್ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ದಾಖಲಿದೆ. ಅಂತರ್ ಧರ್ಮೀಯ ಜೋಡಿಗಳಿಗೆ ಕಿರುಕುಳ ನೀಡಲು ಹಾಗೂ ಅವರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸಲು ಈ ಕಾನೂನು ಜಾರಿಗೆ ತರಲಾಗಿದೆ ಎಂದು ಅದು ಅರ್ಜಿಯಲ್ಲಿ ಹೇಳಿದೆ.
ಐದು ರಾಜ್ಯಗಳ ಕಾನೂನುಗಳು ವ್ಯಕ್ತಿಯು ತನ್ನ ನಂಬಿಕೆಯನ್ನು ಬಹಿರಂಗಪಡಿಸಲು ಒತ್ತಾಯಿಸುತ್ತವೆ. ಇದು ಗೌಪ್ಯತೆಗೆ ವಿರುದ್ಧ ಎಂದು ಅದು ವಾದ ಮಂಡಿಸಿದೆ.




