ಐಪಿಎಲ್ಗೆ ಟಕ್ಕರ್ ಕೊಡಲು ಪ್ರಾರಂಭಿಸಿದ ಪಾಕಿಸ್ತಾನ ಸೂಪರ್ ಲೀಗ್, ಅಂದುಕೊಂಡಂತೆ ಉತ್ತಮ ರೀತಿಯಲ್ಲಿ ಮೂಡಿಬರುತ್ತಿಲ್ಲ.
ಈ ಲೀಗ್ನ ನಿರ್ಮಾಣ ಮತ್ತು ಪ್ರಸಾರ ತಂಡದ ಭಾಗವಾಗಿದ್ದ 23 ಭಾರತೀಯ ಪ್ರಜೆಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸುರಕ್ಷಿತವಾಗಿ ಭಾರತಕ್ಕೆ ಅಟ್ಟಾರಿ ವಾಘಾ ಗಡಿ ಮೂಲಕ ವಾಪಾಸ್ ಕಳಿಸಿಕೊಟ್ಟಿದೆ.
ಪಹಲ್ಗಾಮ್ನಲ್ಲಿ ಗುಂಡಿನ ದಾಳಿ ನಡೆಸಿದ ಉಗ್ರರು, 26 ಅಮಾಯಕ ಪ್ರವಾಸಿಗರನ್ನು ಬಲಿಪಡೆದರು. ಈ ಭೀಕರ ದಾಳಿಯ ಬೆನ್ನಲ್ಲೇ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮತ್ತು ಗಡಿ ಉದ್ವಿಗ್ನತೆ ಉಂಟಾಗಿ, ಯುದ್ಧದ ಭೀತಿ ಶುರುವಾಗಿದೆ. ಏ.27ರೊಳಗೆ ಎಲ್ಲ ಪಾಕಿಸ್ತಾನಿ ಪ್ರಜೆಗಳು ಭಾರತ ಬಿಟ್ಟು ಹೊರಡುವಂತೆ ಕೇಂದ್ರ ಸರ್ಕಾರ ಗಡುವು ನೀಡಿದೆ. ಅಂತೆಯೇ ಪಾಕಿಸ್ತಾನ ಸರ್ಕಾರವು ಏಪ್ರಿಲ್ 30ರೊಳಗೆ ತಮ್ಮ ದೇಶದಲ್ಲಿರುವ ಭಾರತೀಯ ಪ್ರಜೆಗಳು ಪಾಕ್ ತೊರೆಯುವಂತೆ ಆದೇಶಿಸಿದೆ.
'ನಮ್ಮ ಸರ್ಕಾರದ ಆದೇಶದ ಹಿನ್ನೆಲೆ ಪಿಎಸ್‌ಎಲ್ ಪಂದ್ಯಗಳ ನಿರ್ಮಾಣ ಮತ್ತು ಪ್ರಸಾರಕ್ಕಾಗಿ ಪಾಕಿಸ್ತಾನದಲ್ಲಿ ಉಳಿದುಕೊಂಡಿದ್ದ 23 ಭಾರತೀಯ ಪ್ರಜೆಗಳನ್ನು ಪಿಸಿಬಿ ವಾಪಸ್ ಕಳುಹಿಸಿದೆ. ಭಾರತೀಯ ಪ್ರಜೆಗಳೆಲ್ಲರೂ ಲಾಹೋರ್‌ನಿಂದ ಅಟ್ಟಾರಿ ವಾಘಾ ಗಡಿಯ ಮೂಲಕ ತಮ್ಮ ತವರಿಗೆ ಮರಳಿದ್ದಾರೆ' ಎಂದು ಪಿಸಿಬಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.




