ನವದೆಹಲಿ: ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಯು ಏಪ್ರಿಲ್ 23ರಿಂದ ಮೂರು ದಿನಗಳವರೆಗೆ ವಾಷಿಂಗ್ಟನ್‌ನಲ್ಲಿ ನಡೆಯಲಿದೆ.
ಯಾವ ಸರಕುಗಳಿಗೆ ಎಷ್ಟು ಸುಂಕ ವಿಧಿಸಬೇಕು ಹಾಗೂ ಸುಂಕ ವಿನಾಯಿತಿ ನೀಡಬೇಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪ್ರಸ್ತಾವಗಳನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಮೇಲೆ ಟ್ರಂಪ್ ಆಡಳಿತವು ಶೇ 26ರಷ್ಟು ಪ್ರತಿ ಸುಂಕ ಹೇರಿದ್ದು, ಇದರ ಜಾರಿಗೆ 90 ದಿನಗಳವರೆಗೆ ವಿರಾಮ ಘೋಷಿಸಿದೆ. ಹಾಗಾಗಿ, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳಿಗೆ ಬಲ ಬಂದಿದೆ.
ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರವಾಲ್ ಅವರು, ಔಪಚಾರಿಕ ಮಾತುಕತೆ ನಡೆಸುವ ಕೇಂದ್ರದ ಅಧಿಕಾರಿಗಳ ತಂಡದ ನೇತೃತ್ವವಹಿಸಿದ್ದಾರೆ. ಪ್ರಸ್ತುತ ಅವರನ್ನು ವಾಣಿಜ್ಯ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದು, ಅಕ್ಟೋಬರ್ 14ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.




