ನವದೆಹಲಿ: ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಆರೋಪಿ, ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹವ್ವುರ್ ರಾಣಾ ಭಾರತದ ಇತರ ನಗರಗಳಲ್ಲೂ ಅದೇ ರೀತಿಯ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿರಬಹುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
ನ್ಯಾಯಾಲಯವು ಗುರುವಾರ ತಡರಾತ್ರಿ ವಿಚಾರಣೆಗಾಗಿ ರಾಣಾನನ್ನು 18 ದಿನಗಳ ಎನ್‌ಐಎ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಯನ್ನು 20 ದಿನ ಕಸ್ಟಡಿಗೆ ನೀಡುವಂತೆ ಎನ್‌ಐಎ ಕೋರಿತ್ತು. ಕಸ್ಟಡಿ ವಿಚಾರಣೆಗೆ ಅನುಮತಿ ನೀಡಿದ ಕೆಲವೇ ಗಂಟೆಗಳಲ್ಲಿ ಎನ್‌ಐಎ ಅಧಿಕಾರಿಗಳು ರಾಣಾನ ವಿಚಾರಣೆ ಆರಂಭಿಸಿದ್ದಾರೆ.
2008ರ ನ.26ರಂದು ಮುಂಬೈ ಮೇಲೆ ನಡೆದ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ರಾಣಾನನ್ನು ಅಮೆರಿಕದಿಂದ ಗುರುವಾರ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಮುಂಬೈ ಮೇಲಿನ ದಾಳಿಯ ಹಿಂದಿನ ಸಂಪೂರ್ಣ ಸಂಚನ್ನು ಬಯಲಿಗೆಳೆಯಲು ರಾಣಾನನ್ನು ಕಸ್ಟಡಿಗೆ ಒಪ್ಪಿಸಬೇಕು ಎಂದು ಎನ್‌ಐಎ, ನ್ಯಾಯಾಲಯವನ್ನು ಕೋರಿತ್ತು. ಮುಂಬೈ ಮೇಲಿನ ದಾಳಿಯಂತೆಯೇ ದೇಶದ ಇತರ ನಗರಗಳಲ್ಲಿಯೂ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂಬ ಶಂಕೆ ಇರುವುದಾಗಿಯೂ ನ್ಯಾಯಾಲಯಕ್ಕೆ ತಿಳಿಸಿತ್ತು.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದರ್‌ಜೀತ್ ಸಿಂಗ್ ಅವರು ಗುರುವಾರ ತಡರಾತ್ರಿ 1ರ ವೇಳೆ ರಾಣಾನನ್ನು ಎನ್‌ಐಎ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ್ದರು. ಅದರ ಬೆನ್ನಲ್ಲೇ ಆತನನ್ನು ಭಾರಿ ಭದ್ರತೆಯೊಂದಿಗೆ ಎನ್‌ಐಎ ಕೇಂದ್ರ ಕಚೇರಿಗೆ ಕರೆತರಲಾಗಿದೆ.




