ಕಾಸರಗೋಡು: ಕೇರಳದ ಎಲ್ಲಾ 30 ಸಾಂಸ್ಥಿಕ ಜಿಲ್ಲೆಗಳಲ್ಲಿ ಪಕ್ಷದ ಪದಾಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿ ತಮ್ಮ ದೃಷ್ಟಿಕೋನ ಮತ್ತು ಅನುಷ್ಠಾನ ಯೋಜನೆಗಳನ್ನು ವಿಕಸಿತ ಕೇರಳ ಎಂಬ ಸಂಕಲ್ಪ ಸಮಾವೇಶವನ್ನು ಆಯೋಜಿಸುವ ನಿಟ್ಟಿನಲ್ಲಿ ಕೇರಳ ಬಿ.ಜೆ.ಪಿ ಘಟಕದ ನೂತನ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಏ.29ರಂದು ಕಾಸರಗೋಡಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಅದ್ಯಕ್ಷೆ ಅಶ್ವಿನಿ ಎಂ.ಎಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಹೊಸ ಬಸ್ ನಿಲ್ದಾಣ ಸನಿಹದ ಆರ್.ಕೆ.ಮಾಲ್ ಆಡಿಟೋರಿಯಂನಲ್ಲಿ 29ರಂದು ಬೆಳಗ್ಗೆ 10ರಿಂದ ಸಮಾವೇಶ ಜರುಗಲಿದೆ. ಅದೇ ದಿನ ಬೆಳಿಗ್ಗೆ 8ಕ್ಕೆ ಪಕ್ಷದ ಮಂಡಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳ ಜತೆ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಕೋರ್ ಕಮಿಟಿ ಸಭೆ ನಡೆಸುವರು. 9.30ಕ್ಕೆ ಹೊಸ ಬಸ್ ನಿಲ್ದಾಣದಿಂದ ಅವರನ್ನು ಸಭಾಂಗಣಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು. ವಿಕಸಿತ ಕೇರಳ ಸಮಾವೇಶಕ್ಕೆ ಬಿಜೆಪಿ ಗ್ರಾ.ಪಂ. ಘಟಕದ ಪದಾಧಿಕಾರಿಗಳಿಗಿಂತ ಮೇಲ್ಪಟ್ಟವರು ಮತ್ತು ಪಕ್ಷದ ಸಕ್ರಿಯ ಸದಸ್ಯರು, ಜನಪ್ರತಿನಿಧಿಗಳು, 2020ರ ಸ್ಥಳೀಯಾಡಳಿತ ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಪಡೆದ ಅಭ್ಯರ್ಥಿಗಳು, ವಿಶೇಷ ಆಹ್ವಾನಿತರು, ಎನ್.ಡಿಎ ಜಿಲ್ಲಾ ನಾಯಕರನ್ನು ಆಹ್ವಾನಿಸಲಾಗಿದೆಯೆಂದು ಜಿಲ್ಲಾಧ್ಯಕ್ಷೆ ತಿಳಿಸಿದ್ದಾರೆ.
ರಾಜೀವ್ ಚಂದ್ರಶೇಖರ್ ಅವರು ರಾಜ್ಯಾಧ್ಯಕ್ಷರಾದ ಬಳಿಕ ಮುಂದಿರಿಸಿದ "ವಿಕಸಿತ ಕೇರಳ" ಎಂಬ ಸಂಕಲ್ಪದ ಸಮಾವೇಶಕ್ಕಾಗಿ ಅವರು ಕಾಸರಗೋಡಿಗೆ ಆಗಮಿಸಲಿದ್ದು, ಈ ಸಂದರ್ಭ ಕೇರಳದ 30 ಬಿಜೆಪಿ ಸಂಘಟನಾ ಜಿಲ್ಲಾ ಕಾರ್ಯಕರ್ತರೊಂದಿಗೆ ಸಮಾವೇಶದ ಮೂಲಕ ಸಂವಾದ ನಡೆಸಲಿದ್ದಾರೆ. ನರೇಂದ್ರ ಮೋದಿ ಸರ್ಕಾರವು ಪ್ರಾರಂಭಿಸಿದ ಅನೇಕ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಕೇರಳದಲ್ಲಿ ಸೂಕ್ತ ರೀತಿಯಲ್ಲಿ ಜಾರಿಗೆ ತರಲಾಗದ ಪರಿಸ್ಥಿತಿಯಲ್ಲಿ, ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿರಿಸಿ ಸ್ಥಳೀಯಾಡಳಿತ ಮತ್ತು ವಿಧಾನಸಭೆಯಲ್ಲಿ ಬಿಜೆಪಿಯ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲೂ ಅಗತ್ಯ ಸಲಹೆ, ಸೂಚನೆ ನೀಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದ ಪಿ.ಆರ್ ಸುನಿಲ್ ಉಪಸ್ಥಿತರಿದ್ದರು.



