ಚೆನ್ನೈ: ಗೋಕುಲಂ ಗೋಪಾಲನ್ ನೇತೃತ್ವದ ಗೋಕುಲಂ ಗ್ರೂಪ್, ಫೆಮಾ ನಿಯಮಗಳು ಮತ್ತು ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ.) ಪತ್ತೆಹಚ್ಚಿದೆ.
ಗೋಕುಲಂ ಗ್ರೂಪ್ ಆರ್‍ಬಿಐ ಮತ್ತು ಫೆಮಾ ನಿಯಮಗಳನ್ನು ಉಲ್ಲಂಘಿಸಿ 592.52 ಕೋಟಿ ರೂ.ಗಳ ವಿದೇಶಿ ಹಣವನ್ನು ಪಡೆದಿರುವುದು ಕಂಡುಬಂದಿದೆ. ಇದರಲ್ಲಿ 370.80 ಕೋಟಿ ರೂ. ನಗದು ರೂಪದಲ್ಲಿ ಬಂದಿದೆ. 220.74 ಕೋಟಿ ರೂ.ಗಳ ಚೆಕ್‍ಗಳನ್ನು ಸಹ ಸ್ವೀಕರಿಸಲಾಗಿದೆ. ಗೋಕುಲಂ ಗ್ರೂಪ್ ಕಾನೂನು ಉಲ್ಲಂಘಿಸಿ ವಿದೇಶಕ್ಕೂ ಹಣ ವರ್ಗಾಯಿಸಿದೆ ಎಂದು ಇಡಿ ತಂಡ ಕಂಡುಕೊಂಡಿದೆ.
ಚೆನ್ನೈ ಮತ್ತು ಕೋಝಿಕ್ಕೋಡ್‍ನಲ್ಲಿರುವ ಗೋಕುಲಂ ಗ್ರೂಪ್‍ನ ಕೇಂದ್ರಗಳಿಂದ ವಶಪಡಿಸಿಕೊಂಡ ದಾಖಲೆಗಳ ಬಗ್ಗೆಯೂ ತನಿಖೆ ಮುಂದುವರೆದಿದೆ ಎಂದು ಇಡಿ ಪ್ರಕಟಿಸಿದೆ. ಗೋಕುಲಂ ಗ್ರೂಪ್‍ನ ಹೆಚ್ಚಿನ ಸಂಸ್ಥೆಗಳ ಮೇಲೆ ದಾಳಿಗಳು ಮುಂದುವರೆದಿವೆ. ವಶಪಡಿಸಿಕೊಂಡ ದಾಖಲೆಗಳ ತನಿಖೆ ಮುಂದುವರೆದಿದೆ. ಲೆಕ್ಕಕ್ಕೆ ಸಿಗದ ನಿಧಿಯ ಬಗ್ಗೆಯೂ ತನಿಖೆ ನಡೆಯುತ್ತಿದೆ. ಹಣಕಾಸು ಸಂಸ್ಥೆಯೊಂದರಲ್ಲಿ ತಪಾಸಣೆ ನಡೆಸಿದಾಗ 1.5 ಕೋಟಿ ರೂ. ಪತ್ತೆಯಾಗಿದೆ.
ಗೋಕುಲಂ ಗೋಪಾಲನ್ ಅವರ ಸಂಸ್ಥೆಗಳಲ್ಲಿ 1,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಕಪ್ಪು ಹಣದ ವ್ಯವಹಾರ ನಡೆದಿರುವ ಸೂಚನೆಗಳಿವೆ. 2017 ಮತ್ತು 2023 ರಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ನಡೆಸಿದ ತಪಾಸಣೆಗಳು ಈಗ ನಡೆಯುತ್ತಿವೆ. ಈ ದಾಳಿಗೂ ಎಂಬುರಾನ್ ಸಿನಿಮಾ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಇಡಿ ಅಧಿಕಾರಿಗಳು ಸ್ಪಷ್ಟ್ಟಪಡಿಸಿದ್ದಾರೆ.





