ಹೈದರಾಬಾದ್: ಪದ್ಮಶ್ರೀ ಪುರಸ್ಕೃತ ಹಾಗೂ ಟ್ರೀ ಮ್ಯಾನ್ ಎಂದು ಹೆಸರುವಾಸಿಯಾಗಿದ್ದ ತೆಲಂಗಾಣದ ಕಮ್ಮಂ ಜಿಲ್ಲೆಯ ದಾರಿಪಳ್ಳಿ ರಾಮಯ್ಯ (ವನಜೀವಿ ರಾಮಯ್ಯ) ಅವರು ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಮಯ್ಯ ಅವರು ಶುಕ್ರವಾರ ರಾತ್ರಿ ಕಮ್ಮಂನ ದಾರಿಪಳ್ಳಿಯ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಒಂದು ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟಿದ್ದ ಅವರ ಸಾಮಾಜಿಕ ಸೇವೆಯನ್ನು ಮೆಚ್ಚಿ 2017 ರಲ್ಲಿ ಪದ್ಮಶ್ರೀ ಪುರಸ್ಕಾರವನ್ನು ಅವರಿಗೆ ನೀಡಲಾಗಿತ್ತು.
ಮೃತ ವನಜೀವಿ ರಾಮಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು, ಇದು ಭರಿಸಲಾಗದ ನಷ್ಟ. ರಾಮಯ್ಯ ಅವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಕಂಬನಿ ಮಿಡಿದಿದ್ದಾರೆ.
ವನಜೀವಿ ರಾಮಯ್ಯ ಅವರು ಕಳೆದ 37 ವರ್ಷಗಳಿಂದ ತೆಲಂಗಾಣ ಸೇರಿದಂತೆ ಪ್ರತಿದಿನ ಹಲವೆಡೆ ಸಸಿಗಳನ್ನು ನೆಡುತ್ತಿದ್ದರು. ಆ ಮೂಲಕ ಪರಿಸರ ಉಳಿಸಿ ಎಂದು ಸಂದೇಶ ಸಾರುತ್ತಿದ್ದರು.




